Connect with us

BELTHANGADI

ಸಾವಿರ ಅಲ್ಲ ಲಕ್ಷ ಜನ ಸೇರಿಸಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ – ಎಸ್ಪಿ ರಿಷ್ಯಂತ್

ಬೆಳ್ತಂಗಡಿ ಮೇ 27 ; ಶಾಸಕ ಹರೀಶ್ ಪೂಂಜಾ ಬಂಧನ ಸಂದರ್ಭ ನಡೆದ ಡ್ರಾಮಾಗಳಿಗೆ ಎಸ್ಪಿ ರಿಷ್ಯಂತ್ ಅವರು ಸ್ಪಷ್ಟನೆ ನೀಡಿದ್ದು,ಸಾವಿರ ಅಲ್ಲ ಲಕ್ಷ ಜನರನ್ನು ಸೇರಿಸಿದರೂ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.


ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಪೂಂಜಾ ಅವರ ಮನೆಗೆ ಅವರನ್ನು ನಿಯಮಾನುಸಾರ ವಿಚಾರಣೆಗಾಗಿ ಕರೆ ತರಲು ನಾವು ಮೂರು ಮಂದಿ ಪೊಲೀಸರನ್ನು ಮಾತ್ರ ಕಳಿಸಿದ್ದೇವೆ. ಆದರೆ ಅಲ್ಲಿ ಇದ್ದಕ್ಕಿದ್ದಂತೆ ಜನ ಜಮಾಯಿಸಲು ಆರಂಭಿಸಿದ್ದರಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಿರಲಿ ಎಂದು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕಾಗಿ ಬಂತು ಎಂದು ದ.ಕ ಜಿಲ್ಲಾ ಎಸ್.ಪಿ ರಿಷ್ಯಂತ್ ಅವರು ಸ್ಪಷ್ಟನೆ ನೀಡಿದ್ದಾರೆ. ಹರೀಶ್ ಪೂಂಜಾ ಅವರ ಮನೆಯಲ್ಲಿದ್ದ ಜನಪ್ರತಿನಿಧಿಗಳು ನಮ್ಮಲ್ಲಿ ವಿನಂತಿಸಿಕೊಂಡಂತೆ, ಶಾಸಕರ ಮನೆಯ ಕಿರಿದಾದ ದಾರಿಯಲ್ಲಿ ಈಗಾಗಲೇ ಜನ ಜಮಾಯಿಸಿದ್ದಾರೆ. ಅದರ ಮಧ್ಯೆ ಶಾಸಕರನ್ನು ಠಾಣೆಗೆ ಕರೆದುಕೊಂಡು ಬರಲು ಕಷ್ಟ ಸಾದ್ಯವಾಗಬಹುದು. ಆದ್ದರಿಂದ ನಾವು ನಮ್ಮ ಕಾರ್ಯಕರ್ತರನ್ನು ಮರಳಲು ಸೂಚಿಸುತ್ತೇವೆ. ನೀವೂ ನಿಮ್ಮ ಪೊಲೀಸ್ ಸಿಬ್ಬಂದಿಗಳನ್ನು ವಾಪಾಸು ಕರೆಸಿಕೊಳ್ಳಿ ಎಂದಿದ್ದಕ್ಕೆ ಆ ರೀತಿ ಕ್ರಮ ಕೈಗೊಂಡಿದ್ದೇವೆ.

ಆ ಬಳಿಕ ಶಾಸಕರನ್ನು ನಾವು ಠಾಣೆಗೆ ವಿಚಾರಣೆಗೆ ಕರೆತಂದು ವಿಚಾರಣೆ ನಡೆಸಿ ಜಾಮೀನು ನೀಡಿ ಕಳಿಸಿಕೊಟ್ಟಿದ್ದೇವೆ ಎಂದು ಎಸ್.ಪಿ ಅವರು ವಿವರಣೆ ನೀಡಿದರು. ಮೊದಲ ಕೇಸಿನಲ್ಲಿ ಶಾಸಕರಿಗೆ ನಿಯಮಾನುಸಾರ ನೋಟೀಸು ನೀಡಿದ್ದೇವೆ. ಎರಡನೇ ಕೇಸಿನಲ್ಲಿ ಠಾಣೆಯಲ್ಲೇ ಜಾಮೀನು ನೀಡಿದ್ದೇವೆ. ನೋಟೀಸ್ ಗೆ ಅವರು ಯಾವರೀತಿ ಉತ್ತರ ನೀಡುತ್ತಾರೆ ಎಂಬುದನ್ನು ನೋಡಿ ಮುಂದಿನ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದರು. ಕಾನೂನಿನಡಿ ಎಲ್ಲರೂ ಸಮಾನರು. ಪೊಲೀಸರು ಹೋದರೆ ಸಾವಿರ ಜನ ಸೇರಿಸಿ ನೋಟೀಸೇ ನೀಡಬಾರದು ಅಂತ, ಎರಡು ಸಾವಿರ ಜನ ಸೇರಿಸಿದರೆ ವಿಚಾರಣೆನೇ ಮಾಡಬಾರದು ಅಂತ, ಐದು ಸಾವಿರ ಜನ ಸೇರಿಸಿ ಕೇಸೇ ಮಾಡಬಾರದು ಅಂತ‌ಹೇಳಿದರೆ ಹೇಗೆ ಸಾಧ್ಯವಾಗುತ್ತದೆ. ಜನ ಸೇರಿದ ಆಧಾರದ ಮೇಲೆ ಕೇಸು ಬದಲಾಗಲ್ಲ. ತಪ್ಪು ಮಾಡಿದರೆ ಕೇಸು ಆಗಿಯೇ ಆಗುತ್ತದೆ. ಕಾನೂನು ಎಂದರೆ ಲಕ್ಷ ಜನ ಸೇರಿಸಿದ್ರೂ ಅದೇ ಕಾನೂನು ಅದರಂತೆ‌ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.

ಅಕ್ರಮ ಗಣಿಗಾರಿಕೆ ಆಗಿರುವ ಜಾಗ ಸರಕಾರಿನೋ ಖಾಸಗೀನೋ ಎಂದು ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ಖಾಸಗಿಯಾಗಿದ್ದರೆ ಅವರ ವಿರುದ್ದವೂ ಪ್ರಕರಣ‌ ದಾಖಲಿಸಿ ಅವರನ್ನೂ ಬಂಧಿಸುತ್ತೇವೆ. ತಹಶಿಲ್ದಾರ್ ಅವರು ದಾಳಿ ಮಾಡಿದಾಗ ಅಲ್ಲಿನ ಕಾರ್ಮಿಕರು ಯಾರು ಕ್ವಾರಿ ನಡೆಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅದರ ಆಧಾರದಲ್ಲೇ ನಮಗೆ ತಹಶಿಲ್ದಾರ್ ಕಡೆಯಿಂದ ದೂರು ಬಂದಿದೆ. ಆ ಹಿನ್ನೆಲೆಯಲ್ಲಿ ನಾವು ಒಬ್ಬ ಆರೋಪಿಯನ್ನು ಬಂಧಿಸಿದ್ದೇವೆ. ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಬಗ್ಗೆ ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ ಆತನ್ನು ಕೂಡಲೇ ಬಂಧಿಸಲಾಗುವುದು ಪೊಲೀಸರು ಒಟ್ಟು ಪ್ರಕರಣದ‌ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *