KARNATAKA
ಸೌಜನ್ಯಾ ಪರ ಪಾದಯಾತ್ರೆ: 70 ಕಿ.ಮೀ. ಪಾದಯಾತ್ರೆ ಮಾಡಿದ ಶ್ವಾನ!
ಕೊಟ್ಟಿಗೆಹಾರ, ಆಗಸ್ಟ್ 31: ‘ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ, ಕೆಆರ್‌ಎಸ್ ಪಕ್ಷದಿಂದ ಬೆಳ್ತಂಗಡಿಯಿಂದ– ಬೆಂಗಳೂರಿಗೆ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಶ್ವಾನವೊಂದು ಪಕ್ಷದ ಕಾರ್ಯಕರ್ತರ ಜತೆ ಹೆಜ್ಜೆ ಹಾಕುತ್ತಾ ಗಮನ ಸೆಳೆಯುತ್ತಿದೆ.
ಸದ್ಯ ಪಾದಯಾತ್ರೆಯು ಮೂಡಿಗೆರೆ ಗಡಿ ಭಾಗಕ್ಕೆ ತಲುಪಿದ್ದು, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಿಂದ ಪಾದಯಾತ್ರಿಗಳ ಜೊತೆಗೆ ಸೇರಿಕೊಂಡ ಶ್ವಾನ, ಈಗಾಗಲೇ 70 ಕಿ.ಮೀ. ದೂರವನ್ನು ಕ್ರಮಿಸಿ ಪಾದಯಾತ್ರಿಕರೊಂದಿಗೆ ನಡೆದುಕೊಂಡು ಬಂದಿದೆ.
ಪಾದಯಾತ್ರಿಕರು ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆ ಹ್ಯಾಂಡ್‌ಪೋಸ್ಟ್, ಜನ್ನಾಪುರ, ಗೋಣಿಬೀಡು, ಕಸ್ಕೇಬೈಲು ತಲುಪಿದರೂ ಶ್ವಾನ ಮಾತ್ರ ಬೆನ್ನು ಬಿಡದೆ ಅವರೊಂದಿಗೆ ಹೆಜ್ಜೆ ಹಾಕುತ್ತಿದೆ. ಪಾದಯಾತ್ರಿಕರು ಈ ಹೆಣ್ಣು ಶ್ವಾನಕ್ಕೆ ‘ಪ್ರಕೃತಿ’ ಅಂತ ಹೆಸರಿಟ್ಟಿದ್ದಾರೆ.
‘ನಾವು ಬೆಳ್ತಂಗಡಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗಿ ವಾಪಾಸ್ ಬರುವಾಗ ನೇತ್ರಾವತಿ ಸ್ನಾನಘಟ್ಟದ ಬಳಿ ಈ ಶ್ವಾನ ನಮ್ಮನ್ನು ಹಿಂಬಾಲಿಸಿಕೊಂಡು ಬಂದಿದೆ. ಮೊದಲಿಗೆ ನಾವು ಈ ಶ್ವಾನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ಈಗ ಚಾರ್ಮಾಡಿ ಘಾಟ್ ಮೂಲಕ 70ಕಿ.ಮೀ ನಮ್ಮೊಂದಿಗೆ ನಮ್ಮದೊಂದಿಗೆ ನಡೆದುಕೊಂಡು ಬಂದಿರುವುದು ನೋಡಿದರೆ ಅಚ್ಚರಿ ಎನಿಸುತ್ತದೆ. ನಮ್ಮ ಹೋರಾಟಕ್ಕೆ ಶ್ವಾನ ಕೂಡ ಸಾಥ್ ನೀಡಿರುವುದು ಸಂತಸದ ವಿಷಯ’ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಸಿ.ಎನ್.ದೀಪಕ್ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.