BELTHANGADI
ಸೌಜನ್ಯ ಪ್ರಕರಣ: ಮೊದಲ ಬಾರಿಗೆ ಮೌನ ಮುರಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!
ಧರ್ಮಸ್ಥಳ, ಜುಲೈ 19: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳ ಬಗ್ಗೆ ವೀರೇಂದ್ರ ಹೆಗ್ಗಡೆಯವರು ವಿಭಾಗೀಯ ಮುಖ್ಯಸ್ಥರ ಸಭೆ ನಡೆಸಿದ್ದಾರೆ.
ವಿಭಾಗೀಯ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು, ಕ್ಷೇತ್ರದಲ್ಲಿ 60 ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ, ಹಲವು ಸೇವೆ ಮಾಡಿಕೊಂಡು ಬಂದಿದ್ದೇವೆ. ಒಳ್ಳೆಯ ಕೆಲಸ ಅನ್ನೋದು ಎರಡು ರೀತಿಯ ಕತ್ತಿ ಇದ್ದ ಹಾಗೆ, ಅದು ಎರಡೂ ಕಡೆಯಿಂದ ಕೊಯ್ತದೆ, ಪ್ರಚಾರದ ದೃಷ್ಟಿಯಲ್ಲಿ ಒಳ್ಳೆಯದು ಹಾಗೂ ದ್ವೇಷ ಕೂಡ ಉಂಟು ಮಾಡ್ತಾದೆ.
ನಮಗೆ ಕೋಟ್ಯಾಂತರ ಅಭಿಮಾನಿಗಳ ಬಳಗ ಇದೆ, ಇದರಲ್ಲಿ ಕೆಲವರಿಗೆ ದ್ವೇಷ ಆಗಿದೆ. ಇದಕ್ಕೆ ದ್ವೇಷ, ಅಸೂಯೆ ಕಾರಣ, ಧರ್ಮಸ್ಥಳದ ಹೆಸರಲ್ಲಿ ಒಳ್ಳೆಯ ಕೆಲಸ ಆಗ್ತಿದೆ ಅಂತ. ಕ್ಷೇತ್ರದ ಸಂಪತ್ತನ್ನ ಹೇಗೆ ಬಳಸ್ತೀವಿ ಅನ್ನೋದ್ರ ಮೇಲೆ ಅದರ ಪರಿಣಾಮ ಇದೆ. ಈಗ ಅವರು ಮಾತನಾಡುವ ವಿಷಯಗಳು ನಮಗೆ ಸಂಬಂಧವೇ ಇಲ್ಲ, ತನಿಖೆ ಮಾಡಲು ಮೊದಲು ಸರ್ಕಾರಕ್ಕೆ ಮೊದಲು ಪತ್ರ ಬರೆದಿದ್ದೇ ನಾನು. ಸಿಬಿಐಗೆ ಒಪ್ಪಿಸಿ ಅಂತ ಮುಖ್ಯಮಂತ್ರಿಗಳಿಗೆ ಹೇಳಿದ್ದು ನಾನೇ, ಮತ್ತಷ್ಟು ತನಿಖೆ, ಸಂಶೋಧನೆ ಮಾಡಲಿ ಅದರಿಂದ ನಮಗೆ ತೊಂದರೆ ಇಲ್ಲ. ಆದರೆ ಕ್ಷೇತ್ರದ ವಿಷಯ ಯಾಕೆ ಎಳೀತಾರೆ ಅಂತ ಗೊತ್ತಾಗ್ತಿಲ್ಲ.
ಇದರ ಹಿಂದೆ ಅಮಾಯಕ ಹುಡುಗಿಯ ಸಾವಿನ ವಿಚಾರ ಇಲ್ಲ, ಕ್ಷೇತ್ರದ ವಿಚಾರ ಇದೆ. ನನಗೆ ಯಾವುದೇ ಭಯ, ಸಂಕೋಚ ಹಾಗೂ ಸಂದೇಹ ಇಲ್ಲ. ಶತೃತ್ವಕ್ಕೆ ಕಾರಣ ಏನು ಅನ್ನೋದೇ ನಮಗೆ ಇರೋ ಸಮಸ್ಯೆ. ಹಾಗಾಗಿ ನಮ್ಮ ಸಿಬ್ಬಂದಿಗಳಿಗೆ ಈ ಸತ್ಯ ಗೊತ್ತಿರಬಹುದು, ನಾವು ಯಾಕೆ ಸುಮ್ಮನಿದ್ದೇವೆ ಅಂತ ಅನಿಸಬಾರದು, ನಾವು ಸುಮ್ಮನಿರೋದು ಸಂಭಾಷಣೆ ಆರಂಭವಾಗಬಾರದು ಅಂತ.
ಅನೇಕರು ಬಂದು ಕಣ್ಣೀರು ಹಾಕ್ತಾ ಇದಾರೆ, ನಿಮಗೆ ಹೀಗಾದರೆ ಹೇಗೆ ತಡೆಯೋದು ಅಂತ. ಆದರೆ ಈಗ ಪ್ರೀತಿ ಮತ್ತು ದ್ವೇಷ ಯಾರಿಗಿದೆ ಅಂತ ಗೊತ್ತಾಗ್ತಿದೆ. ನಮ್ಮ ಆತ್ಮ ಮತ್ತು ವ್ಯವಹಾರ ಎಲ್ಲವೂ ಸ್ವಚ್ಛವಾಗಿದೆ. ಗುಬ್ಬಿಗೆ ಬ್ರಹ್ಮಾಸ್ತ್ರ ಬಿಡುವ ಅಗತ್ಯವೇ ಇಲ್ಲ.
ನೀವೆಲ್ಲಾ ನಿಮ್ಮ ಸಿಬ್ಬಂದಿ ಕರೆದು ಈ ಬಗ್ಗೆ ಗಟ್ಟಿಯಾಗಿ ಹೇಳಿ. ಧರ್ಮಸ್ಥಳದ ಸಿಬ್ಬಂದಿ ಕಾರಣಕ್ಕೆ ಇಲ್ಲಿ ಎಲ್ಲವೂ ಚೆನ್ನಾಗಿದೆ. ನಮ್ಮ ಒಳ್ಳೆಯ ಕಾರ್ಯಕಗಳು ನಡೆಯುತ್ತೆ, ಇದು ಮಧ್ಯದಲ್ಲಿ ಬಂದ ಮೋಡವಷ್ಟೇ, ಈ ಪರದೆ ತೆಗೀಬೇಕು, ಅದನ್ನ ದೇವರು ತೆಗೀತಾನೆ. ನಿಮ್ಮ ಶಿಸ್ತು ಮತ್ತು ನಿಯಮ ಬಿಡಬೇಡಿ, ನನಗೆ ಯಾವ ಭಯವೂ ಇಲ್ಲ. ನಾವು ಯಾರಿಗೂ ಯಾವ ಅನ್ಯಾಯಕ್ಕೂ ಸಹಕಾರ ಕೊಡಲ್ಲ, ವೈಯಕ್ತಿತ ಅವಮಾನ ಮತ್ತು ವೈಯಕ್ತಿಕ ಸಂಭಾಷಣೆ ಸರಿಯಲ್ಲ, ನಿಲ್ಲಿಸಬೇಕು.
ನಮ್ಮ ಅಭಿಮಾನಿಗಳು ರೆಡಿ ಇದ್ದಾರೆ, ಏನಾದ್ರೂ ಮಾಡಲಿಕ್ಕೆ, ಆದರೆ ನಾನು ಏನೂ ಮಾಡಬೇಡಿ ಅಂದಿದ್ದೇನೆ, ನೈತಿಕ ಶಕ್ತಿ ದೊಡ್ಡದು ಅಂದಿದ್ದೇನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.