LATEST NEWS
ಮಾವುತ ನಾರಾಯಣ ಮತ್ತು ಯಮುನಾ ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ಆರೋಪಿಯನ್ನಾಗಿಸಿದ ತನಿಖಾಧಿಕಾರಿ – ಸಿ ವರದಿಯಲ್ಲಿ ಸ್ಟೋಟಕ ಮಾಹಿತಿ ಬಹಿರಂಗ
ಮಂಗಳೂರು, ಜೂನ್ 22: ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿ ಇದೀಗ ನಿರ್ದೋಷಿಯಾಗಿರುವ ಸಂತೋಷ್ ರಾವ್ ಅವರನ್ನು ಮತ್ತೊಂದು ಕೊಲೆ ಪ್ರಕರಣದಲ್ಲಿ ಸಿಲುಕಿಸಿ ನೈಜ ಆರೋಪಿಗಳನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಹೋರಾಟ ಸಮಿತಿ ಆರೋಪಿಸಿದೆ.
ಸುದ್ದಿಗೋಷ್ಟಿಯಲ್ಲಿ ಈ ಆರೋಪ ಮಾಡಿದ ಹೋರಾಟ ಸಮಿತಿಯ ಪ್ರಮುಖರಾದ ಗಿರೀಶ್ ಮಟ್ಟಣ್ಣನವರ್, ಸೌಜನ್ಯ ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ಮತ್ತೊಂದು ಜೋಡಿ ಕೊಲೆ ಪ್ರಕರಣದಲ್ಲೂ ಆರೋಪಿಯನ್ನಾಗಿಸಿ ತನಿಖಾಧಿಕಾರಿ ವರದಿ ಮಾಡಿರುವುದು ನ್ಯಾಯಾಲಯದ ದಾಖಲೆಗಳಿಂದ ಸಾಬೀತುಗೊಂಡಿದೆ ಎಂದು ಹೇಳಿದರು.
ಸೌಜನ್ಯ ಕೊಲೆ ಪ್ರಕರಣಕ್ಕೆ 21 ದಿನಗಳ ಮುಂಚಿತವಾಗಿ ನಾರಾಯಣ ಮಾವುತ ಹಾಗೂ ಯಮುನಾ ಜೋಡಿ ಕೊಲೆ ಪ್ರಕರಣ ನಡೆದಿತ್ತು. ಈ ಪ್ರಕರಣದ ನೈಜ ಆರೋಪಿಗಳನ್ನು ಪೊಲೀಸ್ ಇಲಾಖೆ 11 ವರ್ಷವಾದರೂ ಪತ್ತೆ ಹಚ್ಚದೆ ಸಿ ವರದಿ ನೀಡಿ ಮೌನವಾಗಿದೆ. ಇದೀಗ ಸಿ ವರದಿ ಸಂಪೂರ್ಣ ದೃಢೀಕೃತ ದಾಖಲೆಯನ್ನು ಸಮಿತಿಯು ಪಡೆದಿದೆ. ಮಾವುತ ಕುಟುಂಬದ ಜೋಡಿ ಕೊಲೆ ಪ್ರಕರಣದಲ್ಲಿಯೂ ಸೌಜನ್ಯ ಪ್ರಕರಣದಲ್ಲಿ ಪ್ರಸ್ತುತ ನಿರ್ದೋಷಿಯಾಗಿ ನ್ಯಾಯಾಲಯದಿಂದ ಬಿಡುಗಡೆಯಾಗಿರುವ ಸಂತೋಷ್ ರಾವ್ ನನ್ನೆಆರೋಪಿ ಮಾಡಲಾಗಿದೆ. ಆ ಮೂಲಕ ಪ್ರರಕರಣದ ದಿಕ್ಕು ತಪ್ಪಿಸಿ ನೈಜ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಸಿ ವರದಿಯ ಅಧ್ಯಯನದಿಂದ ಬಹಿರಂಗಗೊಂಡಿದೆ ಎಂದು ಆರೋಪಿಸಿದರು.
ಎರಡೂ ಪ್ರಕರಣಗಳಲ್ಲಿ ಪ್ರಭಾರಿ ತನಿಖಾಧಿಕಾರಿ, ಸಂತೋಷ್ ರಾವ್ ಧರ್ಮಸ್ಥಳದಲ್ಲೇ ಇದ್ದ ಬಗ್ಗೆ ಭಿನ್ನ ವರದಿ ನೀಡಿದ್ದಾರೆ. ಮಾವುತ ಜತೆ ಮೃತಪಟ್ಟಿದ್ದ ಯಮುನಾ ಎಂಬಾಕೆಯ ಮೇಲೆ ಅತ್ಯಾಚಾರ ನಡೆದ ಸಾಧ್ಯತೆ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿ, ವರದಿಯಲ್ಲಿ ತಿಳಿಸಿ ಎಫ್ಎಸ್ಎಲ್ ವರದಿಗೆ ಶಿಫಾರಸ್ಸು ಮಾಡಿದ್ದಾರೆ. ಆದರೆ ಅತ್ಯಾಚಾರ ಪ್ರಕರಣದಲ್ಲಿ ಸಂತೋಷ್ ರಾವ್ ಪಾತ್ರ ಇಲ್ಲ ಎಂದು 2015ರ ಡಿಸೆಂಬರ್ ನಲ್ಲಿ ಸಂತೋಷ್ ರಾವ್ ನನ್ನು ಪ್ರಕರಣದಿಂದ ಕೈ ಬಿಡಲಾಗುತ್ತದೆ. ಈ ಮೂಲಕ ನೈಜ ಆರೋಪಿಗಳ ಮಾದರಿ ರಕ್ತ ಪರಿಶೀಲನೆ ಮಾಡದೆ ಕೇವಲ ಸಂತೋಷ್ ರಾವ್ ನನ್ನು ಆರೋಪಿಯನ್ನಾಗಿ ಮಾಡಿರುವುದು ನೈಜ ಆರೋಪಿಗಳ ರಕ್ಷಣೆ ಎನ್ನುವುದು ಸಿ ವರದಿಯಿಂದ ದೃಢವಾಗುತ್ತದೆ ಎಂದು ಗಿರೀಶ್ ಮಟ್ಟಣ್ಣನವರ್ ವಿವರಿಸಿದರು.