DAKSHINA KANNADA
ದಕ್ಷಿಣ ಭಾರತದ ಮೊದಲ ವಿಸ್ಟಾಡೋಮ್ ಬೋಗಿಗಳ ರೈಲಿಗೆ ಹಸಿರು ನಿಶಾನೆ

ಮಂಗಳೂರು, ಜುಲೈ 11: ಯಶವಂತಪುರ- ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ವಿಸ್ಟಾಡೋಮ್ ಬೋಗಿಗಳ ರೈಲಿಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮ ಭಾನುವಾರ ಬೆಳಗ್ಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆಯಿತು.
ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಹಾಗೂ ಬೆಂಗಳೂರು ರೈಲಿಗೆ ಹಸಿರು ನಿಶಾನೆ ನೀಡಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ರೈಲ್ವೆ ಇಲಾಖೆಯು ಮುತುವರ್ಜಿ ವಹಿಸಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಿದೆ. ಸಾರ್ವಜನಿಕರು ಅನೇಕ ಬೇಡಿಕೆಗಳನ್ನು ಮುಂದಿಟ್ಟಿದ್ದು, ಒಂದೊಂದೇ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. 2014ರವರೆಗೆ ಆಮೆಗತಿಯಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕಾಮಗಾರಿಯು ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ಬಳಿಕ ಸಾಕಷ್ಟು ತ್ವರಿತವಾಗಿ ನಡೆಯುತ್ತಿದೆ ಎಂದರು.

ವಿಸ್ಟಾಡೋಮ ಬೋಗಿಗಳನ್ನು ಹೊಂದಿರುವ ರೈಲು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಭಾರತೀಯ ರೈಲ್ವೆ ಪರಿಚಯಿಸುತ್ತಿದ್ದು, ರೈಲು ಸಂಖ್ಯೆ 06540/06539 ಮತ್ತು ಇದನ್ನು ಮಂಗಳೂರು ಜೆಎನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಎಂದು ಹೆಸರಿಸಲಾಗಿದೆ.
ವಿಸ್ಟಾಡೋಮ್ ಬೋಗಿಗಳಲ್ಲಿ ಪ್ರಯಾಣಿಸುವವವರಿಗೆ ಪಶ್ಚಿಮ ಘಟ್ಟದ ಸುಂದರ ಸ್ವರೂಪವನ್ನು ಹತ್ತಿರದಿಂದ ನೋಡಲು ಸಾಧ್ಯವಾಗುತ್ತದೆ. ಇನ್ನು ಈ ರೈಲಿನಲ್ಲಿ ತಲಾ 44 ಆಸನಗಳ ಸಾಮರ್ಥ್ಯವಿರುವ ಎರಡು ವಿಸ್ಟಾಡೋಮ್ ಬೋಗಿಗಳಿವೆ. ವಿಶಾಲ ಮತ್ತು ಬೃಹತ್ ಪಾರದರ್ಶಕ ಗಾಜಿನ ಕಿಟಕಿಗಳು ಹೊರಗಿನ ಪ್ರಕೃತಿಯ ನಿಕಟ ಮತ್ತು ಸ್ಪಷ್ಟ ನೋಟವನ್ನು ನೀಡುತ್ತದೆ.
ಈ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ತಯಾರಿಸಲಾಗಿದ್ದು, ಮೇಲ್ ಛಾವಣಿಯನ್ನು ಕೂಡ ಗಾಜಿನಿಂದ ಮಾಡಲಾಗಿದೆ. ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಅಗ್ನಿಶಾಮಕ ಸಾಧನಗಳು, ಎಲ್‌ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ, ಮಲ್ಟಿ-ಟೈರ್ಡ್ ಸ್ಟೀಲ್ ಲಗೇಜ್ ಬೀರು, ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳಿವೆ.
ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಮೇಯರ್ ಪ್ರೇಮಾನಂದ ಶೆಟ್ಟಿ, ಡಿಆರ್ ಎಂ ಕೊಠಾರಿ, ಕಾರ್ಪೋರೆಟ್ ಗಳಾದ ಸುಧೀರ್, ಶೋಭಾ, ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Video: