DAKSHINA KANNADA
ಪುಷ್ಪಗಿರಿ ತಪ್ಪಲಿನಲ್ಲಿ ಭಾರೀ ಶಬ್ದ…ನಿಗೂಢವಾಗಿರುವ ಶಬ್ದದ ಮೂಲ
ಸುಳ್ಯ ಡಿಸೆಂಬರ್ 14 : ಪುಷ್ಪಗಿರಿ ತಪ್ಪಲು ಪ್ರದೇಶದಲ್ಲಿ ಭಾನುವಾರ ರಾತ್ರಿ ಭೀಕರ ಸದ್ದು ಕೇಳಿ ಬಂದಿದ್ದು, ಈ ಶಬ್ದಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಪ್ಪಲು ಪ್ರದೇಶದ ಜನರು ಅನುಭವ ಹಂಚಿಕೊಂಡಿದ್ದಾರೆ.
ಡಿಸೆಂಬರ್ 13 ರಂದು ರಾತ್ರಿ ಮೊದಲು ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಭಯಂಕರ ಶಬ್ದ ಕೇಳಿ ಬಂದಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಂತೆ ಸದ್ದು ಕೇಳಿ ಬಂದಿದ್ದು ಜನರು ಅದರ ಮೂಲವನ್ನು ಹುಡುಕಲು ಆರಂಭಿಸಿದ್ದಾರೆ. ಹೈಸ್ಕೂಲ್ ಕಡೆಯಿಂದ ಶಬ್ಧ ಕೇಳಿ ಬಂದಿದೆ. ಭೂಮಿ ನಡುಗಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೀಗ ಪುಷ್ಪಗಿರಿ ತಪ್ಪಲಿನಲ್ಲೂ ಇದೇ ರೀತಿಯ ಶಬ್ದಕೇಳಿ ಬಂದಿದೆ. ಜನರು ಭೂಮಿಯೊಳಗಿನಿಂದ ಏನೊ ಶಬ್ದವಾಗಿದ್ದು, ಮನೆಯ ಪಾತ್ರೆಗಳೆಲ್ಲಾ ಅಲುಗಾಡಿದ್ದು ಹೀಗೆ ನಾನಾ ರೀತಿಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಶಬ್ದದ ಮೂಲ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.
ಶಬ್ದದ ತೀವ್ರತೆಗೆ ಮಲಗಿದ್ದವರು ಕೂಡ ಎದ್ದು ಕುಳಿತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಗ್ರಾಮದಲ್ಲಿ ಭೀತಿಯ ಜೊತೆಗೆ ಭಾರಿ ಕುತೂಹಲ ಮೂಡಿಸಿದ್ದು. ಮುಖ್ಯ ಪೇಟೆಯಲ್ಲಿ ಗ್ರಾಮದ ಜನರೆಲ್ಲರು ಸೇರಿಕೊಂಡು ಶಬ್ದದ ಮೂಲ ಹುಡುಕುವ ಪ್ರಯತ್ನ ನಡೆಸಿದ್ದಾರೆ. ಘಟನೆಯಿಂದ ಕೆಲ ಮನೆಗಳು ಬಿರುಕು ಬಿಟ್ಟಿವೆ ಎಂದು ಹೇಳಲಾಗಿದೆ