BELTHANGADI
ಬುದ್ಧಿ ಹೇಳಿದ್ದಕ್ಕೆ ತಂದೆಯನ್ನೇ ಮುಗಿಸಿದ ಮಗ
ಬೆಳ್ತಂಗಡಿ, ಅಗಸ್ಟ್ 24: ಉಂಡಾಡಿ ಗುಂಡನಂತೆ ತಿರುಗಾಡಿ,ಕುಡಿದು ಮನೆಗೆ ಬರುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ಅಪ್ಪನ ಕೊಲೆಗೆ ಪಾಪಿ ಮಗ ಯತ್ನಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿಯಲ್ಲಿ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದ ವಾಸು ಸಪಲ್ಯ (75) ಎಂದಿನಂತೆ ಬೆಳ್ತಂಗಡಿ ಜೂನಿಯರ್ ಕಾಲೇಜು ಮೈದಾನಕ್ಕೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಮಗ ದಯಾನಂದ್ ಮಾರಕಾಸ್ತ್ರದಿಂದ ಕೊಲೆಗೆ ಯತ್ನಿಸಿದ್ದಾನೆ.
ಕುತ್ತಿಗೆ ಹಾಗೂ ತಲೆಗೆ ಮಾರಕಾಸ್ತ್ರದಿಂದ ಗಂಭೀರವಾಗಿ ಗಾಯಗೊಂಡ ವಾಸು ಸಪಲ್ಯರನ್ನು ಪೋಲೀಸರು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 75 ವರ್ಷದ ಇಳಿ ವಯಸ್ಸಿನಲ್ಲೂ ದುಡಿಯುತ್ತಿದ್ದ ವಾಸು ಸಪಲ್ಯರ ಎರಡನೇ ಮಗನಾಗಿರುವ ದಯಾನಂದ್ ಯಾವುದೇ ಉದ್ಯೋಗ ಮಾಡದೆ ತಿರುಗಾಟದಲ್ಲಿ ಜೀವನ ಕಳೆಯುತ್ತಿದ್ದ.
ಅಲ್ಲದೆ ಪ್ರತೀ ನಿತ್ಯ ಕುಡಿದು ಮನೆಯಲ್ಲಿ ರಂಪಾಟವನ್ನೂ ನಡೆಸುತ್ತಿದ್ದ. ಇದರಿಂದ ತೀವೃವಾಗಿ ನೊಂದಿದ್ದ ವಾಸು ಸಪಲ್ಯ ಆತನಿಗೆ ಪ್ರತಿನಿತ್ಯ ಬುದ್ಧಿವಾದವನ್ನು ಹೇಳುತ್ತಿದ್ದರು. ಯಾವುದಾದರೂ ಉದ್ಯೋಗಕ್ಕೆ ಸೇರಿ ಸುಧಾರಿಸಿಕೊಳ್ಳುವಂತೆಯೂ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ .
ತಂದೆಯ ಬುದ್ಧಿವಾದ ಮಗ ದಯಾನಂದನಿಗೆ ಹಿಡಿಸುತ್ತಿರಲಿಲ್ಲ ಹಾಗು ಇದೇ ವಿಚಾರವಾಗಿ ತಂದೆ ಮಗನ ನಡುವೆ ಜಗಳವೂ ಅಗುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ನಡುವೆ ಇಂದು ಮುಂಜಾನೆ ವಾಸು ಸಪಲ್ಯ ವಾಕಿಂಗ್ ತೆರಳುವ ಸಂದರ್ಭಕ್ಕೆ ಕಾದು ಕುಳಿತಿದ್ದ ಪಾಪಿ ದಯಾನಂದ್ ಮಾರಕಾಸ್ತ್ರದಿಂದ ತಂದೆಯ ಮೇಲೆಯೇ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಅಪ್ಪ ಚಡಪಡಿಸುವುದನ್ನು ನೋಡಿದ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ಕೃತ್ಯ ನಡೆಸಿ ಆರೋಪಿ ಪರಾರಿಯಾಗುತ್ತಿರುವುದನ್ನು ಸ್ಥಳೀಯರು ಗಮನಿಸಿದ ಹಿನ್ನಲೆಯಲ್ಲಿ ಪೋಲೀಸರು ಇದೀಗ ಆರೋಪಿ ದಯಾನಂದ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೃತ್ಯಕ್ಕೆ ಬಳಸಿದ ತಲವಾರನ್ನು ಆರೋಪಿ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಬೆಳ್ತಂಗಡಿ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.