KARNATAKA
ಸೋಲಾಪುರ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ – ಆರು ಮಂದಿ ದುರ್ಮರಣ

ವಿಜಯಪುರ ಮೇ 21: ವಿಆರ್ ಎಲ್ ಬಸ್ ಲಾರಿ ಮತ್ತು ಕಾರಿನ ನಡುವೆ ನಡೆಜ ಸರಣಿ ಅಪಘಾತದಲ್ಲಿ ಆರು ಮಂದಿ ಸಾವನಪ್ಪಿದ ಘಟನೆ ಮನಗೂಳಿ ಬಳಿ ಸೋಲಾಪುರ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್ಎಚ್– 50) ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಮಹಿಂದ್ರಾ ಸ್ಕಾರ್ಪಿಯೋದಲ್ಲಿ ಇದ್ದ ತೆಲಂಗಾಣದ ಗಡವಾಲದ ಕೆನರಾ ಬ್ಯಾಂಕ್ ಮ್ಯಾನೇಜರ್ ಟಿ.ಭಾಸ್ಕರನ್ ಹಾಗೂ ಅವರ ಪತ್ನಿ ಪವಿತ್ರಾ, ಮಗಳು ಜೋಸ್ನಾ, ಮಹೀಂದ್ರಾ ಸ್ಕಾರ್ಪಿಯೋ ಚಾಲಕ ವಿಜಯಪುರ ಜಿಲ್ಲೆಯ ಹೊರ್ತಿಯ ವಿಕಾಸ ಶಿವಪ್ಪ ಮಕನಿ ಹಾಗೂ ವಿಆರ್‌ಎಲ್ ಬಸ್ ಚಾಲಕ ಕಲಗುಟಗಿ ತಾಂಡಾದ ಬಸವರಾಜ ರಾಠೋಡ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಭಾಸ್ಕರನ್ ಅವರ ಪುತ್ರ ಪ್ರವೀಣತೇಜ ಹಾಗೂ ಲಾರಿ ಚಾಲಕ ಹುಲಜಂತಿಯ ಚನ್ನಬಸು ಸಿದ್ದಪ್ಪ ಮಾಳಿ ಗಾಯಗೊಂಡಿದ್ದು, ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಲಾಪುರದತ್ತ ತೆರಳುತ್ತಿದ್ದ ಮಹೀಂದ್ರಾ ಸ್ಕಾರ್ಪಿಯೋ ಆರಂಭದಲ್ಲಿ ಹೆದ್ದಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಹಾರಿ, ಮುಂಬೈನಿಂದ ಬಳ್ಳಾರಿಗೆ ತೆರಳುತ್ತಿದ್ದ ವಿಆರ್‌ಎಲ್ ಬಸ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಇದೇ ಮಾರ್ಗದಲ್ಲಿ ಬರುತ್ತಿದ್ದ ಲಾರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕಾರ್ಪಿಯೋದಲ್ಲಿದ್ದ ಐವರು ಹಾಗೂ ಬಸ್ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮನಗೂಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.