LATEST NEWS
ಅವಕಾಶಗಳನ್ನು ಅಭಿವೃದ್ಧಿಗೆ ಬಳಸಿಕೊಂಡು ಸಾಮಾಜಿಕ ಕೊಡುಗೆ ಸಲ್ಲಿಸಿ : ಡಾ.ರಾಘವೇಂದ್ರ ಹೊಳ್ಳ ಎನ್,

ಮಂಗಳೂರು ಮಾರ್ಚ್ 30 : ಧ್ಯೇಯ, ಧೈರ್ಯ, ವಿಶ್ವಾಸಾರ್ಹತೆ, ಪ್ರಶಂಸೆಯ ಜತೆಗೆ ಉತ್ತಮ ಸಂವಹನ ಕೌಶಲವಿದ್ದಾಗ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ , ಬದುಕು ರೂಪಿಸಿಕೊಳ್ಳಬಹುದು. ನಮ್ಮ ದೇಶದಲ್ಲಿ ಶಿಕ್ಷಣ ವಂಚಿತರು, ವಿಕಲ ಚೇತನರು, ಮಾನಸಿಕ ಅಸ್ವಸ್ಥರು, ಬಾಲ ಕಾರ್ಮಿಕರು ಹೀಗೆ ಸಾಕಷ್ಟು ಮಂದಿ ಅವಕಾಶವಂಚಿತರಿದ್ದಾರೆ. ಆದರೆ ಅವಕಾಶಗಳ ನಡುವೆ ಬದುಕುತ್ತಿರುವ ಅದೃಷ್ಟವಂತರಾದ ನಾವು ನಮ್ಮ ಸಾಮಥ್ಯವನ್ನು ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ವ್ಯಕ್ತಿತ್ವದ ಜತೆಗೆ ಸಾಂಸ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು ಎಂದು ಮಂಗಳೂರಿನ ಸ್ವಸ್ತಿಕ್ ನ್ಯಾಶನಲ್ ಸ್ಕೂಲ್ ಅಧ್ಯಕ್ಷ, ಸ್ವಸ್ತಿಕ್ ಕನ್ಸಲ್ಟೆನ್ಸಿ ಸರ್ವಿಸ್ ನ ಸಿ.ಒ.ಒ. ಡಾ.ರಾಘವೇಂದ್ರ ಹೊಳ್ಳ ಎನ್. ಹೇಳಿದರು.
ಅವರು ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಆರಂಭಗೊಂಡ ಮೂರು ದಿನಗಳ ರಾಜ್ಯಮಟ್ಟದ ‘ಆಕೃತಿ’ ತಾಂತ್ರಿಕ, ಸಾಂಸ್ಕೃತಿಕ ಉತ್ಸವವನ್ನು ದೀಪಪ್ರಜ್ವಲನದೊಂದಿಗೆ ಉದ್ಘಾಟಿಸಿ ಮಾತನಾಡಿದರು. ಬೆಂಜನಪದವು ಪರಿಸರದಲ್ಲಿ ಎರಡೂವರೆ ದಶಕಗಳ ಹಿಂದೆ ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸುವ ಮೂಲಕ ಈ ಭಾಗದ ಯುವಜನತೆಗೆ ತಾಂತ್ರಿಕ ಶಿಕ್ಷಣ, ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದ ಕೆನರಾ ಶಿಕ್ಷಣ ಸಂಸ್ಥೆ ಇದೀಗ ವಿಕಾಸದ ಹಾದಿಯಲ್ಲಿದ್ದು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯವಾಗಿ ಬೆಳೆಯುವಂತಾಗಲಿ ಎಂದವರು ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷ ಡಿ. ವಾಸುದೇವ ಕಾಮತ್ ಶುಭ ಹಾರೈಸಿದರು.

ಸಮಾರಂಭಕ್ಕೂ ಮೊದಲು ಕಾಲೇಜಿನ ಅಕಾಡೆಮಿಕ್ ಬ್ಲಾಕ್ನಲ್ಲಿ ನೂತನ ಸೆಮಿನಾರ್ ಹಾಲ್, ಡೀನ್ಸ್ ಕ್ಯಾಬಿನ್ಸ್, ಸ್ಕಿಲ್ ಲ್ಯಾಬ್ ಸಹಿತ ನವೀಕೃತ ಲ್ಯಾಬ್ ಗಳನ್ನು ಗಣ್ಯರು ಉದ್ಘಾಟಿಸಿದರು.