DAKSHINA KANNADA
ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಸ್ಥೆ: ರಸ್ತೆ ಪಕ್ಕದ ಗುಂಡಿಗೆ ಬಿದ್ದ ಮಹಿಳೆ -ವ್ಯವಸ್ಥೆಯ ವಿರುದ್ಧ ಆಕ್ರೋಶ
ಮಂಗಳೂರು, ಡಿಸೆಂಬರ್ 20: ನಗರೆದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಸಾಕ್ಷಿಯಾಗಿದೆ. ಇಲ್ಲಿನ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಮುಂಭಾಗದ ರಸ್ತೆ ಪಕ್ಕದ ಗುಂಡಿಗೆ ಮಹಿಳೆಯೊಬ್ಬರು ಬಿದ್ದಿರುವ ಘಟನೆ ನಿನ್ನೆ ನಡೆದಿದೆ.
ಪತಿಯೊಂದಿಗೆ ತೆರಳುತ್ತಿದ್ದ ಮಹಿಳೆಯು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು, ತಕ್ಷಣ ಸ್ಥಳೀಯರು ಅವರನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಕಾಮಗಾರಿಯ ಹಿನ್ನೆಲೆಯಲ್ಲಿ ಅಗೆಯಲ್ಪಟ್ಟ ಈ ಗುಂಡಿಯನ್ನು ಮುಚ್ಚದೆ ಇದ್ದಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.
ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳಿಂದ ಜನನಿಬಿಡ ಪ್ರದೇಶದಲ್ಲಿ ಗುಂಡಿ ತೋಡಲಾಗಿದ್ದು, ಕಾಮಗಾರಿ ಪೂರ್ತಿಗೊಳಿಸದೆ ಬಿಟ್ಟ ಕಾರಣ ಈ ದುರಂತ ಸಂಭವಿಸಿದೆ. ಹಗಲು ಹೊತ್ತಿನಲ್ಲೇ ಈ ದುರಂತ ನಡೆದಿದ್ದು, ರಾತ್ರಿ ವೇಳೆ ಆಕಸ್ಮಿಕವಾಗಿ ಈ ಗುಂಡಿಗೆ ಬಿದ್ದರೆ ಅಂತಹವರ ಪಾಡೇನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು ಎಲ್ಲಿಯೂ ಕೂಡಾ ಸಾರ್ವಜನಿಕರಿಗೆ ಎಚ್ಚರಿಕೆ ಫಲಕಗಳಾಗಲೀ ಕಂಡು ಬರುತ್ತಿಲ್ಲ. ಅಗೆದು ಇಟ್ಟ ಹೊಂಡಗಳನ್ನು ಮುಚ್ಚುತ್ತಿಲ್ಲ. ತಡೆಗೋಡೆಯನ್ನಾಗಲೀ, ಬ್ಯಾರಿಕೇಡ್‌ಗಳನ್ನಾಗಲೀ ಇಡದಿರುವ ಕಾರಣ ಇಂತಹ ದುರಂತಗಳು ಸಂಭವಿಸಲು ಕಾರಣವಾಗಿದೆ ಎಂದು ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.