DAKSHINA KANNADA
SKSMS ಮುಚ್ಚುವ ಸಂಚು, ಎಸ್. ಡಿ.ಸಿ .ಸಿ ಬ್ಯಾಂಕ್ ಅಧ್ಯಕ್ಷರಿಂದ ಕಬಳಿಕೆಗೆ ಹೊಂಚು…….
ಪುತ್ತೂರು,ಅಗಸ್ಟ್1:ಕಳೆದ ಒಂದು ಶತಮಾನಗಳಿಂದ ರೈತರ ಆಶಾಕಿರಣವಾಗಿದ್ದ ದಕ್ಷಿಣಕನ್ನಡ ಕೃಷಿಕರ ಸಹಕಾರಿ ಮಾರಾಟ ಸಂಘವನ್ನು ಒತ್ತಾಯ ಪೂರ್ವಕವಾಗಿ ಮುಚ್ಚುವ ಪ್ರಯತ್ನ ನಡೆಯುತ್ತಿದೆ. ಸಂಘ 21 ಕೋಟಿ ರೂಪಾಯಿಗಳ ನಷ್ಟದಲ್ಲಿ ಕಾರ್ಯಾಚರಿಸುತ್ತಿದೆ ಎನ್ನುವ ಉದ್ಧೇಶಕ್ಕಾಗಿ ಇದೀಗ ಸಂಘಕ್ಕೆ ಸೇರಿದ ನೂರಾರು ಕೋಟಿ ಮೌಲ್ಯದ ಆಸ್ತಿಗಳನ್ನು ಲೂಟಿ ಹೊಡೆಯಲಾಗಿದೆ. ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಎಮ್.ಎನ್.ರಾಜೇಂದ್ರ ಕುಮಾರ್ ಈ ಗೋಲ್ ಮಾಲ್ ನ ಹಿಂದಿದ್ದಾರೆ ಎನ್ನುವುದಕ್ಕೆ ಇದೀಗ ದಾಖಲೆಗಳೂ ಲಭ್ಯವಾಗಿದೆ.
1919 ರಲ್ಲಿ ಪ್ರಾರಂಭಗೊಂಡ ಈ ಸಹಕಾರಿ ಸಂಘ ಜಿಲ್ಲೆಯ ಕೃಷಿಕರು ತಮ್ಮ ತೋಟಗಳಲ್ಲಿ ಬೆಳೆದ ಯಾವುದೇ ಬೆಳೆಗಳನ್ನು ಈ ಮಾರಾಟ ಕೇಂದ್ರಕ್ಕೆ ತಂದು ಹರಾಜು ಮೂಲಕ ಮಾರಾಟ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅಲ್ಲದೆ ಕೃಷಿಕ ತನ್ನ ಬೆಳೆಯನ್ನು ಶೇಖರಣೆ ಇಡಲು ದೊಡ್ಡದಾದ ಗೋದಾಮಿನ ವ್ಯವಸ್ಥೆಯೂ ಇಲ್ಲಿತ್ತು. 9.65 ಕೋಟಿ ಡಿಪೋಸಿಟ್ ಹಾಗೂ 3116 ಸದಸ್ಯರನ್ನು ಹೊಂದಿದ್ದ ಈ ಸಂಘಕ್ಕೆ 16 ಕೋಟಿ ರೂಪಾಯಿ ಬಾಕಿ ವಸೂಲಿಯೂ ಆಗಬೇಕಿತ್ತು. ಆದರೆ 2013 ರ ಅಕ್ಟೋಬರ್ 10 ರಂದು ಸಂಘವು 21 ಕೋಟಿ ನಷ್ಟದಲ್ಲಿದೆ ಎನ್ನುವ ಕಾರಣಕ್ಕೆ ಆಡಳಿತ ಮಂಡಳಿಯನ್ನು ಬರ್ಕಾಸ್ತುಗೊಳಿಸಲಾಯಿತು. ಬಳಿಕ ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೊಂದಿನ ವಿಲೀನಗೊಳಿಸುವ ಪ್ರಕ್ರಿಯೆಯೂ ನಡೆದಿದ್ದು, ಸಂಘದ ಆಡಳಿತಾಧಿಕಾರಿಯನ್ನೂ ನೇಮಿಸಲಾಯಿತು. ಬಳಿಕ ಸಂಘದ ಆಸ್ತಿಯನ್ನು ಮಾರಾಟ ಮಾಡುವ ನಿರ್ಧಾರವನ್ನೂ ತೆಗೆದುಕೊಳ್ಳಲಾಯಿತು.
ಮಂಗಳೂರಿನ ಹೃದಯ ಭಾಗದಲ್ಲಿರುವ ಸಂಘಕ್ಕೆ ಸೇರಿದ 90.5 ಸೆಂಟ್ಸ್ ಜಾಗವನ್ನು ಸಹಕಾರಿ ಆಕ್ಟ್ ಗೆ ವಿರುದ್ಧವಾಗಿ ಖಾಸಗಿ ವ್ಯಕ್ತಿಗಳಿಗೆ ನೀಡುವ ಏಕಪಕ್ಷೀಯ ನಿರ್ಧಾರವನ್ನೂ ತೆಗೆದುಕೊಳ್ಳಲಾಯಿತು. 2013 ರ ಸರಕಾರಿ ಮಾರುಕಟ್ಟೆ ಬೆಲೆಯ ಪ್ರಕಾರ ಈ ಭೂಮಿಗೆ 28.39 ಕೋಟಿ ರೂಪಾಯಿಗಳಿತ್ತಾದರೂ, ಕೇವಲ 8 ಕೋಟಿಗೆ ಈ ಭೂಮಿಯನ್ನು ಮಾರಾಟ ಮಾಡಿ, 1 ಕೋಟಿ ರೂಪಾಯಿಯನ್ನು ಕೃಷಿಕರ ಸಹಕಾರಿ ಮಾರಾಟ ಸಂಘಕ್ಕೆ ನೀಡಲಾಗಿದ್ದು, ಉಳಿದ 7 ಕೋಟಿ ರೂಪಾಯಿಗಳನ್ನು ಲೆಕ್ಕ ಪುಸ್ತಕದಲ್ಲೇ ತೋರಿಸಲಾಯಿತು. ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೊಂದಿಗೆ ವಿಲೀನವಾದ ಬಳಿಕ ಈ ಸಹಕಾರಿ ಮಾರಾಟ ಸಂಘದ ಎಲ್ಲಾ ಆಡಳಿತವೂ ಕೇಂದ್ರ ಸಹಕಾರಿ ಬ್ಯಾಂಕ್ ಗೆ ವರ್ಗಾಯಿಸಿದ ಬಳಿಕ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಬೇನಾಮಿ ಹೆಸರಿನಲ್ಲಿ ಮಂಗಳೂರಿನ ಹೃದಯ ಭಾಗದಲ್ಲಿರುವ ಸಹಕಾರಿ ಮಾರಾಟ ಸಂಘದ ಜಮೀನನ್ನು ಪಡೆದುಕೊಂಡಿದ್ದರು. ಅಂದರೆ ಸುಮಾರು 20 ಕೋಟಿ ರೂಪಾಯಿಗಳನ್ನು ವಂಚಿಸಿ ಈ ಭೂಮಿಯನ್ನು ರಾಜೇಂದ್ರ ಕುಮಾರ್ ತನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವುದು ಸಂಘದ ಪರವಾಗಿ ಹೋರಾಟ ನಡೆಸುತ್ತಿರುವ ಕಿಸಾನ್ ಸಂಘದ ಸಂಚಾಲಕರಾದ ಎಂ.ಜಿ.ಸತ್ಯನಾರಾಯಣ್ ಅವರ ಆರೋಪ.
ಅಲ್ಲದೆ ಸಹಕಾರಿ ಮಾರಾಟ ಸಂಘದ ಮಾರಾಟ ಮಾಡಲಾಗಿದೆ ಎನ್ನುವ ಮಂಗಳೂರಿನ ಭೂಮಿಯ ಮೇಲೆ 3.5 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಕೋಟಿ ರೂಪಾಯಿಗಳ ಸಾಲವಿತ್ತು ಎನ್ನುವ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು. 10.10.2013 ಕ್ಕೆ ಮಂಗಳೂರಿನ ಭೂಮಿಯನ್ನು ಮಾರಾಟ ಮಾಡಲಾಗಿರುವ ದಾಖಲೆಯಿದ್ದು, 17.3.2014 ಕ್ಕೆ 30.03.1970 ರ ಕೃಷಿಕರ ಸಹಕಾರಿ ಮಾರಾಟ ಸಂಘದ ಹಳೆ ದಾಖಲೆಯನ್ನಿಟ್ಟು ಈ ಸಾಲವನ್ನು ಪಡೆಯಲಾಗಿತ್ತು. ಸಂಘದ ಜಾಗವನ್ನು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ ಬಳಿಕ ಮತ್ತೆ ಸಂಘದ ಹೆಸರಿನಲ್ಲಿ ಸಾಲ ತೆಗೆಯುವುದರ ಹಿಂದಿರುವ ಕೈಗಳು ಯಾವುದು ಎನ್ನುವ ಸಂಶಯಗಳು ಇದೀಗ ಹುಟ್ಟಿಕೊಂಡಿದ್ದು, ಸಂಘದ ಭೂಮಿಯನ್ನು ಖರೀದಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮೇಲೆಯೇ ಈ ಸಂಶಯಗಳು ಹುಟ್ಟುವಂತೆಯೂ ಮಾಡಿದೆ. ಕಾರಣ ಕೃಷಿಕರ ಸಹಕಾರಿ ಮಾರಾಟ ಸಂಘದ ಮಂಗಳೂರಿನ ಭೂಮಿಯನ್ನು ಎಂ.ಎಸ್. ಸ್ಮಾರ್ಟ್ ಬಿಲ್ಡರ್ಸ್ ಹೆಸರಿನಲ್ಲಿ ಇಬ್ರಾಹಿಂ ಎನ್ನುವ ಹೆಸರಿನ ವ್ಯಕ್ತಿಗೆ ನೊಂದಣಿ ಮಾಡಲಾಗಿತ್ತು.
ಎಂ.ಎಸ್.ಸ್ಮಾರ್ಟ್ ಬಿಲ್ಡರ್ಸ್ ಹೆಸರಿನಲ್ಲಿ ಜಾಗ ನೊಂದಣಿಯಾದ ಹತ್ತೇ ದಿನದಲ್ಲಿ ಕಂಪನಿಯ ಸಿ.ಒ ಆಗಿ ಎಂ.ಎನ್.ರಾಜೇಂದ್ರ ಕುಮಾರ್ ಹಾಗೂ ಅವರ ಮಗ ಮೇಘರಾಜ್ ಆಗುತ್ತಾರೆ. ಅಲ್ಲದೆ ಭೂಮಿಯ ಖರೀದಿಗೆ ಕೇವಲ ಆರು ತಿಂಗಳ ಮೊದಲು ಎಂ.ಎಸ್ ಸ್ಮಾರ್ಟ್ ಬಿಲ್ಡರ್ಸ್ ಎನ್ನುವ ಸಂಸ್ಥೆ ನೊಂದಣಿಯಾಗಿದ್ದು, ಈ ಎಲ್ಲಾ ಪ್ರಕ್ರಿಯೆಗಳೂ ಕೃಷಿಕರ ಸಹಕಾರಿ ಮಾರಾಟ ಸಂಘದ ಆಸ್ತಿಯನ್ನು ಲಪಟಾಯಿಸಲು ಹೆಣೆದ ದಾಳವಾಗಿತ್ತು ಎನ್ನುವ ಸ್ಪಷ್ಟವಾಗುತ್ತದೆ. ರಾಜಾರೋಷವಾಗಿ ಇಂಥಹ ವ್ಯವಹಾರಗಳು ನಡೆದಿದ್ದರೂ, ಸರಕಾರವಾಗಲೀ, ಅಧಿಕಾರಿಗಳಾಗಲಿ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ. ಕೃಷಿಕರ ಆಶಾಕಿರಣವಾಗಿದ್ದ ಸಹಕಾರಿ ಮಾರಾಟ ಸಂಘವನ್ನು ಒತ್ತಾಯಪೂರ್ವಕವಾಗಿ ಮುಚ್ಚುವ ಹಿಂದೆ ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಕೈವಾಡವಿರುವುದು ಸ್ಪಷ್ಟವಾಗಿದ್ದು, ಅವರ ವಿರುದ್ಧ ಕ್ರಮಕ್ಕೆ ಇದೀಗ ಸಂಘದ ಸದಸ್ಯರು ಒತ್ತಾಯಿಸುತ್ತಿದ್ದಾರೆ.