UDUPI
ಶಿವಾಜಿ ಮಹಾರಾಜರ ಆದರ್ಶ ಎಲ್ಲರಿಗೂ ಮಾದರಿ- ಶೀಲಾ ಶೆಟ್ಟಿ
ಶಿವಾಜಿ ಮಹಾರಾಜರ ಆದರ್ಶ ಎಲ್ಲರಿಗೂ ಮಾದರಿ- ಶೀಲಾ ಶೆಟ್ಟಿ
ಉಡುಪಿ ಫೆಬ್ರವರಿ 19 : ಶಿವಾಜಿ ಮಹಾರಾಜರ ಆಡಳಿತ ವೈಖರಿ, ಅವರು ಮಹಿಳೆಯರಿಗೆ ನೀಡಿದಂತಹ ಕಾಳಜಿ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅವರಲಿದ್ದ ಚಿಂತನೆ ಎಲ್ಲರಿಗೂ ಮಾದರಿಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಮರಾಠ ಸ್ವಾಭಿಮಾನಿ ಜಾಗೃತಿ ಪ್ರತಿಷ್ಠಾನ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತು(ರಿ) ಉಡುಪಿ ಇವರ ಸಹಯೋಗದಲ್ಲಿ , ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು ನಲ್ಲಿ ನಡೆದ , ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೂ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸುವಲ್ಲಿ ಶಿವಾಜಿಯ ಪಾತ್ರ ಹಿರಿದಾಗಿದ್ದು, ಆಡಳಿತವನ್ನು ಹೇಗೆ ನಿರ್ವಹಿಸಬೇಕು ಎಂಬುವುದನ್ನು ತನ್ನ ಬುದ್ದಿವಂತಿಕೆ, ಧೈರ್ಯ ಮತ್ತು ತಂತ್ರಗಳ ಮೂಲಕ ಶಿವಾಜಿ ತಿಳಿಸಿಕೊಟ್ಟಿದ್ದಾರೆ. ಶಿವಾಜಿ ಮಹಾರಾಜರ ಆಡಳಿತ ವೈಖರಿ, , ಶಿಷ್ಠಾಚಾರ, ತಂದೆ ತಾಯಿಗೆ ನೀಡಿದ ಗೌರವ ಹಾಗೂ ಭಾಷೆ ಮತ್ತು ಸಂಸ್ಕೃತಿಗೆ ಅವರು ನೀಡಿದ ಕೊಡುಗೆಗಳು ಎಲ್ಲರಿಗೂ ಆದರ್ಶವಾಗಬೇಕು ಎಂದರು.
ನಿಟ್ಟೆ ಡಾ.ಎನ್.ಎಸ್.ಎ.ಎಮ್ ಪಿ.ಯು ಕಾಲೇಜಿನ ಉಪನ್ಯಾಸಕಿ ಅಕ್ಷಯ ಗೋಖಲೆ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿ, ವೀರ ಕ್ರಾಂತಿ ಪುರುಷನಾದ ಶಿವಾಜಿ ದೇಶ ನನ್ನದು, ಧರ್ಮ ನನ್ನದು ಎನ್ನುವ ಪರಿಕಲ್ಪನೆಯಿಂದ ಹೋರಾಡಿ ಹಿಂದೂ ಸಾಮ್ರಾಜ್ಯ ತಲೆಎತ್ತಿ ನಿಲ್ಲುವಂತೆ ಮಾಡಿದವರು. ಇಂದು ನಾವು ರೈತರು, ಪೊಲೀಸರು, ಹಾಗೂ ಸೈನಿಕರಲ್ಲಿ ವೀರ ಶಿವಾಜಿಯನ್ನು ಕಾಣುತ್ತಿದ್ದೇವೆ ಎಂದರು.