LATEST NEWS
ಅಮಿತ್ ಷಾ ರಾಜ್ಯಕ್ಕೆ ಬಂದರೆ ಸಿಎಂಗೆ ಭಯ – ಶೋಭಾ ಕರಂದ್ಲಾಜೆ
ಅಮಿತ್ ಷಾ ರಾಜ್ಯಕ್ಕೆ ಬಂದರೆ ಸಿಎಂಗೆ ಭಯ – ಶೋಭಾ ಕರಂದ್ಲಾಜೆ
ಮಂಗಳೂರು ಜನವರಿ 23: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ಜಿಲ್ಲಾ ಪ್ರಮುಖರ ಸಭೆ ನಡೆಯಿತು. ರಾಜ್ಯ ಚುನಾವಣಾ ಉಸ್ತುವಾರಿ ಹೊತ್ತಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದೆ.
ಸಭೆಯಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬರುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಯ ತಂದಿದೆ ಎಂದರು. ಈ ಹಿನ್ನಲೆಯಲ್ಲಿ ಜನವರಿ 27ರಂದು ಇದ್ದ ಬಂದ್ ನ್ನು 25ಕ್ಕೆ ಹಾಕಿದ್ದಾರೆ. ರಾಜ್ಯ ಸರಕಾರ ಸಂಘಟನೆಗಳಿಗೆ ಸಂಪೂರ್ಣ ಬೆಂಬಲ ನೀಡಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಿರಂತರ ಕೊಲೆಗಳಾಗುತ್ತಿದ್ದು, ಜಿಲ್ಲೆಯಲ್ಲಿ ಮೂರು ತಿಂಗಳೊಳಗೆ ಐದು ಕೊಲೆಯಾಗಿದೆ, ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದೆ ಅಲ್ಲದೇ ದರೋಡೆಕೋರರನ್ನು ಹೊಂದಿದ 2ನೇ ರಾಜ್ಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ದಕ್ಷ ಅಧಿಕಾರಿಗಳಿಗೆ ಯಾವುದೇ ಉಳಿಗಾಲ ಇಲ್ಲ. ಡಿಸಿ, ಎಸ್ಪಿ ಬಂದು ಮುಖಪರಿಚಯ ಆಗುವ ಮೊದಲೇ ವರ್ಗಾವಣೆ ಆಗುತ್ತಿದೆ ಎಂದು ಹೇಳಿದರು. ಸರ್ಕಾರಕ್ಕೆ ತಗ್ಗಿ ಬಗ್ಗಿ ಇದ್ದವರಿಗೆ ರಕ್ಷಣೆ ಇದೆ ದಕ್ಷ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ಎಂದು ಆರೋಪಿಸಿದರು. ಇದಕ್ಕೆ ಸಾಕ್ಷಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಪಿ ವರ್ಗಾವಣೆಯಾಗಿದೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಅಲೆ ಎದ್ದು ಕಾಣುತ್ತಿದ್ದು ಈ ಭಾರಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.