LATEST NEWS
ಬಶೀರ್ ಕೊಲೆಯತ್ನ ಸಿಸಿಟಿವಿ ವಿಡಿಯೋ ಪ್ರಸಾರ – ವರದಿಗಾರರಿಗೆ ನೋಟಿಸ್ ಭಯ

ಬಶೀರ್ ಕೊಲೆಯತ್ನ ಸಿಸಿಟಿವಿ ವಿಡಿಯೋ ಪ್ರಸಾರ – ವರದಿಗಾರರಿಗೆ ನೋಟಿಸ್ ಭಯ
ಮಂಗಳೂರು ಜನವರಿ 5: ಮಂಗಳೂರಿನ ಕಾಟಿಪಳ್ಳದಲ್ಲಿ ಬರ್ಬರವಾಗಿ ಹತ್ಯೆಯಾದ ದೀಪಕ್ ರಾವ್ ಪ್ರಕರಣದ ಬಳಿಕ ಮಂಗಳೂರಿನಲ್ಲಿ ನಡೆದ ಬಶೀರ್ ಕೊಲೆ ಯತ್ನ ಪ್ರಕರಣ ಈಗ ಭಾರಿ ಸದ್ದು ಮಾಡುತ್ತಿದೆ.
ನಗರದ ಕೊಟ್ಟಾರ ಚೌಕಿ ಎಂಬಲ್ಲಿ ಫಾಸ್ಟ್ ಫುಡ್ ಅಂಗಡಿ ಹೊಂದಿದ್ದ ಅಬ್ದುಲ್ ಬಶೀರ್ ಜನವರಿ 3 ರಂದು ರಾತ್ರಿ 10.30ರ ಸುಮಾರಿಗೆ ವ್ಯಾಪಾರ ಮುಗಿಸಿ ಅಂಗಡಿಗೆ ಬೀಗ ಹಾಕುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಅಬ್ಗುಲ್ ಬಶೀರ್ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ಏನು ಅರಿಯದ ಅಮಾಯಕ ಅಬ್ದುಲ್ ಬಶೀರ್ ಏನು ನಡೆಯುತ್ತಿದೆ ಎನ್ನುವಷ್ಟರಲ್ಲಿ ದುಷ್ಕರ್ಮಿಗಳು ತಲವಾರ್ ಪೆಟ್ಟು ಬಶೀರ್ ಅವರನ್ನು ನೆಲಕ್ಕುರುಳಿಸಿತ್ತು.

ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಅಬ್ದುಲ್ ಬಶೀರ್ ಅವರನ್ನು ಸ್ಥಳೀಯ ನಿವಾಸಿ ಶೇಖರ್ ಎಂಬವರು ಹತ್ತಿರದಲ್ಲೆ ಇದ್ದ ಎ.ಜೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಪರಿಣಾಮ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆತ ಅಬ್ದುಲ್ ಬಶೀರ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಧರ್ಮಕ್ಕಿಂತ ಮಾನವೀಯ ಮೌಲ್ಗಗಳೇ ಈ ಘಟನೆಯಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟಿದೆ.
ಈ ಘಟನೆಯ ಕುರಿತು ಪೊಲೀಸ್ ಇಲಾಖೆ ತನಿಖೆ ಆರಂಭಿಸಿದ್ದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದೆ. ಆದರೆ ಈ ನಡುವೆ ಈ ಘಚನೆಯ ಸಿಸಿಟಿವಿ ವಿಡಿಯೋವನ್ನು ಕೆಲ ಮಾಧ್ಯಮಗಳು ಬಳಸಿಕೊಂಡಿರುವುದು ಈಗ ವಿವಾದಕ್ಕೆ ಗುರಿಯಾಗಿದೆ.
ಇಂದು ಮಧ್ಯಾಹ್ನದಿಂದ ಕೆಲ ವಾಹಿನಿಗಳು ದುಷ್ಕರ್ಮಿಗಳು ಬಶೀರ್ ಅವರ ಮೇಲೆ ದಾಳಿ ನಡೆಸಿದ ಸಿಸಿಟಿವಿ ವಿಡಿಯೋವನ್ನು ಪ್ರಸಾರ ಮಾಡಿವೆ. ಈ ಕುರಿತು ಡಿಬೇಟ್ ನಡೆಸಿವೆ. ಒಂದೆಡೆ ಪೊಲೀಸ್ ಇಲಾಖೆ ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತದ್ದು ದುಷ್ಕರ್ಮಿಗಳ ಪತ್ತೆಗೆ ಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಮಾಧ್ಯಮಗಳು ಅವಿವೇಕತನದಿಂದ ಮಾಡಿದ ಎಲ್ಲಾ ಶ್ರಮ ವ್ಯರ್ಥವಾಗಿದೆ.
ಈ ಸಿಸಿಟಿವಿ ವಿಡಿಯೋ ಯಾವ ಮೂಲದಿಂದ ಲೀಕ್ ಆಗಿದೆ ಎನ್ನುವುದರ ಕುರಿತು ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ. ಇನ್ನೊಂದೆಡೆ ಈ ಸಿಸಿಟಿವಿ ವಿಡಿಯೋ ಪ್ರಸಾರ ಮಾಡಿದ ವಾಹಿನಿಗಳ ವರದಿಗಾರರಿಗೆ ನೋಟಿಸ್ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಅದಲ್ಲದೇ ಸಮಾಜಿಕ ಜಾಲತಾಣದಲ್ಲಿ ಈ ಸಿಸಿಟಿವಿ ವಿಡಿಯೋ ಹರಿಬಿಟ್ಟವರ ಪತ್ತೆಗೂ ತನಿಖೆ ಆರಂಭವಾಗಿದೆ.
ಈ ಘಟನೆಯ ವಿಡಿಯೋ ಪ್ರಸಾರ ಮಾಡಿ ಮಾಧ್ಯಮಗಳು ಉರಿಯುತ್ತಿರುವ ಬೆಂಕಿಗೆ ಮತ್ತೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಲಾಗಿತ್ತು. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಂಡು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪಾಠ ಕಲಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.