DAKSHINA KANNADA
ಎಂಪೈರ್ ಮಾಲ್ ನಲ್ಲಿ ಅಗ್ನಿ ಅವಘಡ, ಇಬ್ಬರು ಅಸ್ವಸ್ಥ

ಎಂಪೈರ್ ಮಾಲ್ ನಲ್ಲಿ ಅಗ್ನಿ ಅವಘಡ, ಇಬ್ಬರು ಅಸ್ವಸ್ಥ
ಮಂಗಳೂರು,ಅಕ್ಟೋಬರ್ 20: ನಗರದ ಎಂಪೈರ್ ಮಾಲ್ ನಲ್ಲಿ ಮತ್ತೊಂದು ಶಾಟ್ ಸರ್ಕೂಟ್ ದುರಂತ ಸಂಭವಿಸಿದ್ದು, ಲಿಫ್ಟ್ ರೂಂ ನಲ್ಲಿ ಸಿಲುಕಿದ ಇಬ್ಬರು ಗಂಭೀರವಾಗಿ ಅಸ್ವಸ್ಥರಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಆರು ವರ್ಷಗಳ ಹಿಂದೆ ಇದೇ ಕಟ್ಟಡದಲ್ಲಿ ಇಂಥಹುದೇ ಒಂದು ಅನಾಹುತ ಸಂಭವಿಸಿದ್ದು, ಆ ಸಂದರ್ಭದಲ್ಲಿ ಕೆಲವರು ಅಸ್ವಸ್ಥರಾಗಿದ್ದರು. ಇಂದು ರಾತ್ರಿ ಲಿಫ್ಟ್ ರೂಂ ಸಮೀಪ ಈ ಶಾಟ್ ಸರ್ಕೂಟ್ ಸಂಭವಿಸಿದೆ.

ಈ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಇಬ್ಬರು ಹೊಗೆಯಿಂದಾಗಿ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣ ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಹಾಗೂ ಬರ್ಕೆ ಪೋಲೀಸರು ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಡೆದಿದ್ದಾರೆ. ಎಂಪೈರ್ ಮಾಲ್ ಮೂಲಗಳ ಪ್ರಕಾರ ಕಟ್ಟಡದ ಸಂಪೂರ್ಣ ವಿದ್ಯುತ್ ಪೂರೈಕೆಯ ವ್ಯವಸ್ಥೆ ಸಂಪೂರ್ಣ ಕೆಟ್ಟು ಹೋಗಿದ್ದು, ಈ ಕಾರಣಕ್ಕಾಗಿಯೇ ಆರು ವರ್ಷಗಳ ಹಿಂದೆಯೂ ಕಟ್ಟಡದಲ್ಲಿ ಶಾಟ್ ಸರ್ಕೂಟ್ ನಿಂದ ಅಗ್ನಿ ಆಕಸ್ಮಿಕ ಸಂಭವಿಸಿತ್ತು.
ಇದರಿಂದ ಪಾಠ ಕಲಿಯದ ಕಟ್ಟಡದ ಮಾಲಿಕನ ಬೇಜಾವಾಬ್ದಾರಿಯಿಂದಾಗಿ ಇದೀಗ ಮತ್ತೆ ಅಗ್ನಿ ಆಕಸ್ಮಿಕ ಸಂಭವಿಸಿದೆ.
ಇಂದು ನಡೆದ ಘಟನೆಯಿಂದ ಅಸ್ವಸ್ಥರಾದ ಇಬ್ಬರೂ ಶ್ವಾಸದ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಅವರ ದೇಹಸ್ಥಿತಿ ಸುಧಾರಿಸಿದೆ.