KARNATAKA
ಉಡುಪಿ – ಚಿಕ್ಕಮಗಳೂರಿನ ಟಿಕೆಟಿಗೆ ಪ್ರಮೋದ್ ಫೈಟ್, ಅಲ್ಲಾಡುತ್ತಿದೆ ಶೋಭಾ ಕುರ್ಚಿ..!!
ಕಾಂಗ್ರೆಸ್ ನಲ್ಲಿ ಅಭ್ಯರ್ಥಿಯ ಕೊರತೆ ಇದ್ರೂ ಜಯಪ್ರಕಾಶ್ ಹೆಗ್ಡೆ ಹೆಸರು ಚಾಲ್ತಿಯಲ್ಲಿದೆ. ಇತ್ತ ಬಿಜೆಪಿಯಲ್ಲಿ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಧ್ಯೆ ಟಿಕೇಟ್ ಗಾಗಿ ಮೆಗಾ ಫೈಟ್ ಆರಂಭವಾಗಿದೆ.
ಉಡುಪಿ: ಲೋಕಸಭಾ ಚುನಾವಣೆಯ ದಿನಾಂಕವೇ ಘೋಷಣೆಯೇ ಆಗಿಲ್ಲವಾದ್ರೂ ಈ ಮಾರ್ಚ್ಚ ತಿಂಗಳ ಕೊನೆ ವಾರ ದಿನಾಂಕ ಘೋಷಣೆಯಾಗುವ ಸಂಭವವಿದೆ. ಆದ್ರೆ ಈ ಮಧ್ಯೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಮಾತ್ರ ಈಗಾಗಲೇ ರಂಗೇರಿದೆ.
ಕಾಂಗ್ರೆಸ್ ನಲ್ಲಿ ಅಭ್ಯರ್ಥಿಯ ಕೊರತೆ ಇದ್ರೂ ಜಯಪ್ರಕಾಶ್ ಹೆಗ್ಡೆ ಹೆಸರು ಚಾಲ್ತಿಯಲ್ಲಿದೆ. ಇತ್ತ ಬಿಜೆಪಿಯಲ್ಲಿ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಧ್ಯೆ ಟಿಕೇಟ್ ಗಾಗಿ ಮೆಗಾ ಫೈಟ್ ಆರಂಭವಾಗಿದೆ. 2ನೇ ಬಾರಿ ಸಂಸದೆಯಾಗಿ, ಕೇಂದ್ರ ಮಂತ್ರಿಯೂ ಆಗಿರುವ ಶೋಭಾ, ತಮ್ಮ ಇಲಾಖೆಯ ಕೆಲಸಗಳಲ್ಲಿ ದಿಲ್ಲಿಯಲ್ಲಿಯೇ ವ್ಯಸ್ತರಾಗಿ, ಉಡುಪಿ, ಚಿಕ್ಕಮಗಳೂರು ಕಡೆ ಬಂದದ್ದು, ಕಾರ್ಯಕರ್ತರನ್ನು ಭೇಟಿಯಾದದ್ದು, ಅಥವಾ ಸಮಸ್ಯೆಗಳಿಗೆ ಪರಿಹಾರ ನೀಡಿದ್ದು ತೀರ ಕಮ್ಮಿ ಆದ್ರೆ ಈ ಬಾರಿಯೂ ತನಗೇ ಟಿಕೆಟ್ ಎಂಬ ಧೈರ್ಯದಿಂದ ನಿನ್ನೆ ಮೊನ್ನೆಯವರೆಗೆ ಆರಾಮದಲ್ಲಿದ್ದರು.
ಆದ್ರೆ ಈ ಗಾದಿ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಪ್ರಮೋದ್ ಮಧ್ಯರಾಜ್ ತಳ ಮಟ್ಟದಲ್ಲೇ ಅಖಾಡಕ್ಕೆ ಇಳಿದು ಕ್ಷೇತ್ರ ಸಂಚಾರ ಈಗಾಗಾಲೇ ಆರಂಭಿಸಿದ್ದಾರೆ ಮತ್ತು ಕಾರ್ಯಕರ್ತರಿಂದ ಪ್ರಮೋದ್‌ಗೆ ವ್ಯಾಪಕ ಬೆಂಬಲ ಕೂಡ ದೊರೆಯುತ್ತಿದೆ. ಪ್ರಮೋದ್ ಫೀಲ್ಡಿಗಿಳಿದ ಸುದ್ದಿ ಡೆಲ್ಲಿಯಲ್ಲಿ ಕುಳಿತ ಶೋಭಾ ಕಿವಿಗೆ ಬಿದ್ದಿದ್ದು ಶೋಭಾಳ ಕುರ್ಚಿ ಸಣ್ಣಗೆ ಶೇಕ್ ಮಾಡಲು ಆರಂಭಿಸಿದೆ. ಅದ್ದರಿಂದಲೇ ಉಡುಪಿಗೆ ಬಂದವರೇ ಬಿಜೆಪಿಯಲ್ಲಿ ಹಣ ಇದ್ದವರಿಗೆ ಟಿಕೇಟ್ ಸಿಗುವುದಿಲ್ಲ, ಹಾಗೇ ಸಿಗುತ್ತಿದ್ದರೇ ಟಾಟಾ ಬಿರ್ಲಾ ಅಂಬಾನಿ ಅವರಿಗೂ ಟಿಕೇಟ್ ಸಿಗುತ್ತಿತ್ತು, ಅವರೂ ಪ್ರದಾನಿಯಾಗುತ್ತಿದ್ದರು ಎಂದು ಪ್ರಮೋದ್ ವಿರುದ್ಧ ಗಟ್ಟಿಯಾಗಿ ಶೋಭಾ ಅವರು ಗುಟುರು ಹಾಕಿದ್ದಾರೆ.
ಅತ್ತ ಚಿಕ್ಕಮಗಳೂರು, ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರು “ಗೋ ಬ್ಯಾಕ್ ಶೋಭಾ” ನ್ನುತ್ತಿದ್ದಾರೆ. ಶೋಭಾ ವಿರುದ್ಧ ಪಕ್ಷದ ವರಿಷ್ಟರಿಗೆ ಪತ್ರ ಚಳವಳಿಯೇ ಆರಂಭಿಸಿದ್ದಾರೆ. ಮಾತ್ರವಲ್ಲ ಶೋಭಾ ವಿರುದ್ದ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ‘ಇದರ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ, ಬಿಜೆಪಿಯಲ್ಲಿದ್ದವರು ಹೀಗೆ ಮಾಡುವವರಲ್ಲ, ಹೊರಗಿನಿಂದ ಬಂದವರದ್ದೇ ಕೆಲಸ ಇದು’ ಎಂದು ನೇರವಾಗಿ ಪ್ರಮೋದ್ ಅವರತ್ತ ಶೋಭಾ ಕೈತೋರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಮೋದ್, ‘ನನಗೆ ಉಡುಪಿ, ಚಿಕ್ಕಮಗಳೂರಿನಲ್ಲಿ ಸಂಚರಿಸುವಾಗ ಬಿಜೆಪಿ ಕಾರ್ಯಕರ್ತರ ಒಲವು ತನ್ನ ಕಡೆಗಿರುವುದು ಸ್ಪಷ್ಟವಾಗಿದೆ. ಮೀನುಗಾರರು ಕೂಡ ತಮ್ಮ ಸಮುದಾಯದ ವ್ಯಕ್ತಿ ಪಾರ್ಲಿಮೆಂಟ್ ಗೆ ಹೋಗಬೇಕು ಎಂದು ಬಯಸುತಿದ್ದಾರೆ. ಹೈಕಮಾಂಡ್ ತನ್ನನ್ನು ಪರಿಗಣಿಸುತ್ತದೆ’ ಎಂದು ತಮ್ಮ ಜಾತಿಯ ದಾಳ ಉರುಳಿಸಿದ್ದಾರೆ, ಮಾಸ್ಟರ್ ಮೈಂಡ್ ಪ್ರಮೋದ್ ಬಿಜೆಪಿಗೆ ಬಂದಂದಿನಿಂದಲೂ ಉಡುಪಿ, ಚಿಕ್ಕಮಗಳೂರಿನಲ್ಲಿ ಓಡಾಡುತಿದ್ದಾರೆ, ಇಮೇಜ್ ಬಿಲ್ಡ್ ಮಾಡಿಕೊಳ್ಳುತಿದ್ದಾರೆ. ಉತ್ತರಪ್ರದೇಶ ಸಿಎಂ ಯೋಗಿ ಅವರನ್ನು, ಡೆಲ್ಲಿಯ ಬಿಜೆಪಿಯ, ಆರೆಸ್ಸೆಸ್ಸ್ ಮುಖಂಡರನ್ನು ಭೇಟಿಯಾಗಿದ್ದಾರೆ. ಮೊನ್ನೆ ಆಯೋಧ್ಯೆಗೂ ಹೋಗಿ ಬಂದಿದ್ದಾರೆ, ಒಟ್ಟಿನಲ್ಲಿ ದಿನಾ ಚಾಲ್ತಿಯಲ್ಲಿದ್ದಾರೆ.
ಒಂದು ಕಡೆಯಲ್ಲಿ ಶೋಭಾ ಅವರ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಹುಟ್ಟಿಕೊಂಡಿರುವ ಸಣ್ಣ ಅಸಮಾಧಾನ, ನಿಧಾನವಾಗಿ ಪ್ರಮೋದ್ ಅವರತ್ತ ಕಾರ್ಯಕರ್ತರು ತಿರುಗುವಂತೆ ಮಾಡಿದೆ, ನಿನ್ನೆ ಮೊನ್ನೆ ಕಾಂಗ್ರೆಸ್ ನಲ್ಲಿದ್ದಾಗ ಪ್ರಮೋದ್ ಅವರನ್ನು ಬೈಯ್ಯುತ್ತಿದ್ದ ಬಿಜೆಪಿಯ ಪಂಚಾಯತ್ ಸದಸ್ಯರು ಈಗ, ಶೋಭಾ ಅವರ ಬದಲು ಪ್ರಮೋದ್ ಆಗಬಹುದು ಮಾರ್ರೆ… ಎನ್ನುತ್ತಿದ್ದಾರೆ.’
ಆದರೆ ಇತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಪರ ನಿಂತಿದ್ದಾರೆ. ಯಾವುದಕ್ಕೂ ಎಲ್ಲವನ್ನೂ ಗಮನಿಸುತ್ತಿರುವ ಹೈ ಕಮಾಂಡ್ ನಿರ್ಧಾರ ಬರುವವರೆಗೂ ಕಾಯಬೇಕು.