LATEST NEWS
ತಮಿಳುನಾಡಿನ ಜನರ ಕ್ಷಮೆ ಕೇಳಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಚೆನ್ನೈ ಸೆಪ್ಟೆಂಬರ್ 03: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಭಾಗಿಯಾಗಿದ್ದವರಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿತ್ತು ಎಂಬ ಹೇಳಿಕೆ ನೀಡಿದ್ದಕ್ಕಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಂಗಳವಾರ ತಮಿಳುನಾಡಿನ ಜನತೆಯ ಕ್ಷಮೆ ಕೋರಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ನಾನು ತಮಿಳುನಾಡಿನ ಜನರ ಬಗ್ಗೆ ನಾನು ಹೇಳಿದ ಮಾತು, ತಮಿಳುನಾಡಿನ ಜನರ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದರು.
ತಮಿಳುನಾಡಿನ ಇತಿಹಾಸ, ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಮತ್ತು ತಮಿಳುನಾಡಿನ ಜನರ ಬಗ್ಗೆ ನನಗೆ ಹೆಚ್ಚಿನ ಗೌರವಿದೆ. ನನ್ನ ಯಾವುದೇ ನಡವಳಿಕೆಯಿಂದ ತಮಿಳುನಾಡಿನ ಜನರ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶ ನನಗಿಲ್ಲ. ಆದ್ದರಿಂದ, ನನ್ನ ಹೇಳಿಕೆಯಿಂದ ಯಾವುದೇ ರೀತಿಯ ನೋವುಂಟಾಗಿರುವುದಕ್ಕೆ ನಾನು ಮತ್ತೊಮ್ಮೆ ತಮಿಳುನಾಡಿನ ಜನರ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಮದ್ರಾಸ್ ಹೈಕೋರ್ಟ್ ಗೆ ಅಪಿಡವಿಟ್ ಸಲ್ಲಿಸಿರುವ ಅವರು ನ್ನ ಹೇಳಿಕೆಯನ್ನು ಕೋರ್ಟ್ ಮಾನ್ಯಮಾಡಬೇಕು ಎಂದು ಅರ್ಜಿಯಲ್ಲಿ ಸಲ್ಲಿಸಿದ್ದಾರೆ.
ತಮ್ಮ ವಿರುದ್ದ ದಾಖಲಾದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟ್ ಸಾರ್ವಜನಿಕವಾಗಿ ಕ್ಷಮೆ ಕೇಳಿ ಎಂದು ಹೇಳಿತ್ತು. ಈ ಹಿನ್ನಲೆ ಇದೀಗ ಶೋಭಾ ಕರಂದ್ಲಾಜೆ ನ್ಯಾಯಾಲಯಕ್ಕೆ ತಮ್ಮ ಅಫಿಡವಿಟ್ ಸಲ್ಲಿಸಿದ್ದಾರೆ.