LATEST NEWS
ನಾವು ಕರ್ನಾಟಕದವರು ಪ್ರತ್ಯೇಕ ತುಳು ರಾಜ್ಯ ಬೇಡಿಕೆಗೆ ಬೆಂಬಲ ಇಲ್ಲ – ಶೋಭಾ ಕರಂದ್ಲಾಜೆ

ಉಡುಪಿ ಜೂನ್ 21: ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಸಿಗಬೇಕು, ಈ ಕುರಿತಂತೆ ಸಂಸತ್ತಿನಲ್ಲೂ ನಾನು ಈ ಬಗ್ಗೆ ಮಾತನಾಡಿದ್ದೇನೆ ಅಲ್ಲದೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ನಾನು ಮನವಿ ಸಲ್ಲಿಸಿದ್ದೇನೆ, ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಏನೆಲ್ಲ ಮಾಡಬೇಕು ಆ ಪ್ರಯತ್ನ ಮಾಡುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ನಾವು ಕರ್ನಾಟಕದವರು ಪ್ರತ್ಯೇಕ ತುಳುರಾಜ್ಯಕ್ಕೆ ಯಾವುದೇ ಬೇಡಿಕೆ ಇಲ್ಲ, ಅಲ್ಲದೆ ಈ ರೀತಿಯ ಕುಚೋದ್ಯದ ಬೇಡಿಕೆ ಮತ್ತು ಆಶಯಗಳಿಗೆ ನಮ್ಮ ಯಾವುದೇ ಬೆಂಬಲ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕರ್ನಾಟಕ ಏಕೀಕರಣವಾದ ಮೇಲೆ ನಾವೆಲ್ಲ ಒಟ್ಟಾಗಿ ಇರಬೇಕಾದವರು, ನಮ್ಮೊಳಗಿನ ಒಡಕಿನ ಮಾತುಗಳನ್ನು ಮಹಾರಾಷ್ಟ್ರ ದುರುಪಯೋಗ ಮಾಡುವ ಸಾಧ್ಯತೆ ಇದೆ, ಕರ್ನಾಟಕದಲ್ಲಿ ತುಳು ಭಾಷೆಗೆ ಗೌರವ ಸಿಗಬೇಕು, ಆ ನಿಟ್ಟಿನಲ್ಲಿ ತುಳು ಭಾಷೆಗಾಗಿ ನಮ್ಮ ಹೋರಾಟ ಇದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಸಂಪುಟ ವಿಸ್ತರಣೆ ವಿಚಾರ ಬಗ್ಗೆ ಮಾಹಿತಿ ನೀಡಿದ ಅವರು, ಈ ಬಗ್ಗೆ ನನಗೇನೂ ಮಾಹಿತಿ ಇಲ್ಲ, ಪ್ರಧಾನಿ ನರೇಂದ್ರ ಮೋದಿ ಅವರೇ ಮಾಹಿತಿ ಕೊಡಬೇಕು ಸಚಿವೆ ಆಗಬೇಕೆಂಬ ಆಕಾಂಕ್ಷೆ ಖಂಡಿತ ನನಗಿಲ್ಲ, ದಕ್ಷಿಣ ಭಾರತದಲ್ಲಿ ಬಹಳ ಹಿರಿಯ ನಾಯಕರಿದ್ದಾರೆ. ಕರ್ನಾಟಕದಲ್ಲಿ ನನಗಿಂತ ತುಂಬಾ ಹಿರಿಯರಿದ್ದಾರೆ ಎಂದರು.
ಇನ್ನು ಎಡಮೊಗೆ ಉದಯ ಗಾಣಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಕೊಲೆ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು, ಅಪರಾಧದಲ್ಲಿ ಪಕ್ಷ, ರಾಜ, ಧರ್ಮ ರಾಜಕಾರಣ ಇಲ್ಲ, ಘಟನೆ ನಡೆದ ಮೊದಲ ದಿನವೇ ಗೃಹ ಸಚಿವ, ಎಸ್ಪಿ ಅವರಿಗೆ ಫೋನ್ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ತಿಳಿಸಿದ್ದೇನೆ ಎಂದರು.