LATEST NEWS
ದೇವಾಲಯ ಧ್ವಂಸ ಪ್ರಕರಣ – ರಾಜ್ಯ ಸರಕಾರದ ವಿರುದ್ದ ಅಸಮಧಾನ ಹೊರ ಹಾಕಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಉಡುಪಿ ಸೆಪ್ಟೆಂಬರ್ 17: ನಂಜನಗೂಡು ದೇವಸ್ಥಾನ ಧ್ವಂಸ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೇವಸ್ಥಾನಗಳನ್ನು ಕೆಡವಿದರೆ ನಮಗೆ ಒಳ್ಳೆದಾಗಲ್ಲ ಎಂದು ರಾಜ್ಯ ಸರಕಾರದ ಕ್ರಮದ ವಿರುದ್ದ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರದ್ಧಾಕೇಂದ್ರಗಳ ಬಗ್ಗೆ ಜನರ ನಂಬಿಕೆ ಜಾಸ್ತಿ ಇರುತ್ತದೆ. ಭಕ್ತಿ ಭಾವ ಪ್ರೀತಿ ಜಾಸ್ತಿ ಇರುವ ಕೇಂದ್ರಗಳನ್ನು ಕೆಡವಿದಾಗ ಭಕ್ತರ ಭಾವನೆಗೆ ನೋವಾದಾಗ ಪ್ರತಿಭಟನೆ ನಡೆಸುತ್ತಾರೆ. ಯಾವುದೇ ಸಮುದಾಯ, ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ ಎಂದು ಪರೋಕ್ಷವಾಗಿ ಸರ್ಕಾರದ ಕ್ರಮವನ್ನು ಟೀಕಿಸಿದರು.
ದೇವಸ್ಥಾನ, ಮಸೀದಿ, ಚರ್ಚ್ ನಮ್ಮ ಶ್ರದ್ಧಾ ಕೇಂದ್ರಗಳು. ಶ್ರದ್ಧಾ ಕೇಂದ್ರಗಳ ರಕ್ಷಣೆ ನಮ್ಮ ಜವಾಬ್ದಾರಿ. ಅಕ್ರಮ ಸ್ಥಳದಲ್ಲಿ ಶ್ರದ್ಧಾಕೇಂದ್ರಗಳಿದ್ದರೆ ಪೂರ್ವ ಸೂಚನೆ ನೀಡಬೇಕು. ಸ್ಥಳೀಯ ಜನರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಜನರನ್ನು ಒಪ್ಪಿಸಿ ಧಾರ್ಮಿಕ ಕೇಂದ್ರ ತೆರವು ಮಾಡುವ ಬಗ್ಗೆ ಸರ್ಕಾರ ಯೋಚಿಸಬೇಕು. ಅಕ್ರಮ ದೇವಾಲಯ ಕಂಡು ಬಂದರೆ ಊರಿನ ಜನರ ಮನವೊಲಿಸಿ ಇದು ರಾಜ್ಯ ಸರಕಾರಕ್ಕೆ ನನ್ನ ಪ್ರಾರ್ಥನೆ ಎಂದರು