DAKSHINA KANNADA
ಸುಪ್ರೀಂ ಕೋರ್ಟ್ ನಲ್ಲಿ ಅಡಿಕೆಯ ಪರ ವಾದಿಸಲು ಅನುಭವಿ ವಕೀಲರ ತಂಡದ ನೇಮಕಕ್ಕೆ ಪ್ರಧಾನಿ ಸ್ಪಂದನೆ

ಪುತ್ತೂರು ಫೆಬ್ರವರಿ 10: ಅಡಿಕೆ ಹಾನಿಕಾರಕ ಎನ್ನುವ ವಿಚಾರ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು, ಅಡಿಕೆ ಹಾನಿಕಾರಕವಲ್ಲ ಎಂದು ವಾದಿಸಲು ಅನುಭವಿ ವಕೀಲರ ತಂಡ ನೇಮಿಸುವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಮತ್ತು ಕ್ಯಾಂಪ್ಕೋ ಸಂಸ್ಥೆಯ ಜಂಟಿ ಆಶ್ರಯದಲ್ಲಿ ವಿವೇಕಾನಂದ ಮೃದಾನದಲ್ಲಿ ನಡೆಯುವ ಮೂರು ದಿನಗಳ ಕೃಷಿಯಂತ್ರ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಡಿಕೆ ಹಾನಿಕಾರಕ ಎನ್ನುವ ವಿಚಾರವನ್ನು ಆಗಿನ ಆರೋಗ್ಯ ಇಲಾಖೆ ಸುಪ್ರೀಂಕೋರ್ಟ್ ನಲ್ಲಿ ಅಫಿದಾವಿತ್ ಸಲ್ಲಿಸಿದ ಹಿನ್ನಲೆಯಲ್ಲಿ ಅಡಿಕೆ ನಿಶೇಧದ ತೂಗುಗತ್ತಿ ಅಡಿಕೆ ಬೆಳೆಗಾರನ ನೆತ್ತಿ ಮೇಲೆ ಇರುವಂತಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಸಂಸದರ ನಿಯೋಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಕೇಳಿಕೊಳ್ಳಲಾಗಿದೆ. ಪ್ರಧಾನಿ ಮೋದಿಗೆ ಅಡಿಕೆಯ ಬಗ್ಗರ ಎಲ್ಲಾ ಮಾಹಿತಿ ಇದ್ದ ಕಾರಣ, ಸುಪ್ರೀಂಕೋರ್ಟ್ ನಲ್ಲಿ ಅಡಿಕೆಯ ಪರವಾಗಿ ವಾದಿಸಲು ಅನುಭವಿ ವಕೀಲರ ತಂಡ ನೇಮಿಸುವ ಬಗ್ಗೆ ಸ್ಪಂದನೆಯನ್ನು ನೀಡಿದ್ದಾರೆ ಎಂದರು.

ಕೇಂದ್ರ ಸರಕಾರ ಅಡಿಕೆಯ ಆಮದು ಬೆಲೆಯನ್ನು 215 ರೂಪಾಯಿಗಳಿಗೆ ಏರಿಸಿದ ಕಾರಣ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಒಂದೇ ರೀತಿ ಇರುವಂತಾಗಿದೆ. ಇದೀಗ ಮತ್ತೆ ಅಡಿಕೆಯ ಆಮದು ಬೆಲೆಯನ್ನು 351 ರೂಪಾಯಿ ಹೆಚ್ಚಿಸುವಂತೆ ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕೋಡ್ಗಿಯವರು ಮನವಿ ಮಾಡಿದ್ದು, ಈ ಪ್ರಸ್ತಾವನೆಯನ್ನು ಕೃಷಿ ಇಲಾಖೆ ಮಾನ್ಯ ಮಾಡಿದೆ. ಈ ಸಂಬಂಧ ಶೀಘ್ರವೇ ಇದಕ್ಕೆ ಹಣಕಾಸಿನ ಇಲಾಖೆಯ ಸಮ್ಮತಿಯೂ ದೊರಕಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.