DAKSHINA KANNADA
34 ವರ್ಷದಲ್ಲಿ 177 ಬಾರಿ ಶಬರಿಮಲೆ ಯಾತ್ರೆ : ದಾಖಲೆ ಬರೆದ ಪುತ್ತೂರಿನ ಶಿವ ಪ್ರಕಾಶ್

34 ವರ್ಷದಲ್ಲಿ 177 ಬಾರಿ ಶಬರಿಮಲೆ ಯಾತ್ರೆ : ದಾಖಲೆ ಬರೆದ ಪುತ್ತೂರಿನ ಶಿವ ಪ್ರಕಾಶ್
ಪುತ್ತೂರು, ಜನವರಿ 15 : ಜೀವನದಲ್ಲಿ ಒಂದು ಸಲವಾದರೂ ಶಬರಿಮಲೆ ಯಾತ್ರೆ ಕೈಗೊಳ್ಳಬೇಕೆಂಬ ಆಸೆ ಇಟ್ಟುಕೊಂಡವರ ಸಂಖ್ಯೆ ಅಗಣಿತ.
18 ವರ್ಷ ಇರುಮುಡಿ ಹೊತ್ತು ”ಪದಿನೆಟ್ಟಾಂಪಡಿ’ ಏರಿ ಸ್ವಾಮಿ ದರ್ಶನ ಮಾಡಿ ಬಂದರೆ ಮಹಾ ಪುಣ್ಯ ಎಂಬ ನಂಬಿಕೆಯವರು ಲಕ್ಷಾಂತರ ಮಂದಿ ಇದ್ದಾರೆ.

ಇಲ್ಲೊಬ್ಬರು 34 ವರ್ಷಗಳಲ್ಲಿ ಬರೋಬ್ಬರಿ 177 ಬಾರಿ ಶಬರಿಮಲೆ ಯಾತ್ರೆ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ .
ಇವರೇ ಶಿವಪ್ರಕಾಶ್. ಪುತ್ತೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ವಿಷಯ ನಿರ್ವಾಹಕರಾಗಿದ್ದು, ಪ್ರಭಾರ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿದ್ದಾರೆ.
ಅಯ್ಯಪ್ಪ ಸ್ವಾಮಿಯ ಪರಮ ಭಕ್ತನಾದ ಶಿವಪ್ರಕಾಶ್, 34 ವರ್ಷಗಳ ಹಿಂದೆ ಶಬರಿಮಲೆಗೆ ಮೊದಲ ಯಾತ್ರೆ ಕೈಗೊಂಡರು.
ಬಳಿಕ ನಿರಂತರ ಯಾತ್ರೆ ಅಭ್ಯಾಸ ಮಾಡಿಕೊಂಡರು. ಇದ್ದಕ್ಕಿದ್ದಂತೆ 48 ತಿಂಗಳು ನಿರಂತರ ಮಾಲೆ ಹಾಕಿ ಬರುತ್ತೇನೆ ಎಂದು ಸ್ವಾಮಿ ಎದುರು ಸಂಕಲ್ಪ ಮಾಡಿಕೊಂಡರು. ಈ 48 ತಿಂಗಳ ಗಡಿ ದಾಟಿ ಅದೇಷ್ಟೋ ಸಮಯ ಆಯಿತು.
1983ರಿಂದ 1991ರ ಅವಧಿಯಲ್ಲಿ ಕೆಲವು ಬಾರಿ ಶಬರಿಮಲೆಗೆ ಹೋಗಿ ಬಂದ ಶಿವಪ್ರಕಾಶ್, 1991ರಿಂದ ಪ್ರಮಾಣ ಹೆಚ್ಚಿಸಿದರು.
2004ರಲ್ಲಿ ಹೊಸ ತಿರುವು ಸಿಕ್ಕಿತು. 4 ವರ್ಷ ತಿಂಗಳಿಗೆ ಒಂದರಂತೆ 48 ತಿಂಗಳು ನಿರಂತರ ಮಾಲೆ ಹಾಕಿ ಹೋಗುವೆ ಎಂದು ಸಂಕಲ್ಪ ಕೈಗೊಂಡರು.
2008ರಲ್ಲಿ ಈ ಅಭಿಯಾನ ಮುಗಿಯಬೇಕಿತ್ತು. ಯಾಕೊ ನಿಲ್ಲಿಸಲು ಮನಸಾಗಲಿಲ್ಲ. ಪರಿಣಾಮ 2018ರ ಜನವರಿಗೆ ಭರ್ತಿ 13 ವರ್ಷ ತುಂಬುತ್ತಿದೆ.
”ಈ ಅವಧಿಯ 156 ತಿಂಗಳಲ್ಲಿ 156 ಬಾರಿ ಅಯ್ಯಪ್ಪ ದರ್ಶನ ಮಾಡಿ ಬಂದಿದ್ದೇನೆ. ಹಿಂದಿನ ಯಾತ್ರೆಯನ್ನೂ ಸೇರಿಸಿದರೆ ಅದು 176ಕ್ಕೇರಿದೆ’ ಎನ್ನುತ್ತಾರೆ ಶಿವಪ್ರಕಾಶ್.
ಪ್ರಸ್ತುತ ವಾರ್ಷಿಕ ಶಬರಿಮಲೆ ಯಾತ್ರೆ ಸೀಸನ್ ನಡೆಯುತ್ತಿದ್ದು, ಸನ್ನಿಧಾನದಲ್ಲಿ ಮಂಡಲ ಪೂಜೆ ಸಂಪನ್ನಗೊಂಡಿದೆ.
ಶಿವಪ್ರಕಾಶ್ 48 ದಿನಗಳ ವ್ರತಾಚರಣೆಯಲ್ಲಿದ್ದಾರೆ. ಡಿಸೆಂಬರ್ ತಿಂಗಳ ಯಾತ್ರೆ ಮುಗಿಸಿ ಬಂದಿದ್ದಾರೆ.
ಜನವರಿ 14ರ ಮಕರವಿಳಕ್ಕು ಉತ್ಸವ ಮುಗಿದ ಬಳಿಕ ಜ.16ರಂದು ಇವರ 177ನೇ ಯಾತ್ರೆ ನಡೆಯಲಿದೆ.
ವಿಶೇಷವೆಂದರೆ ಪ್ರತೀ ಬಾರಿ ಮಾಲೆ ಧರಿಸಿ, ವ್ರತಾಚರಣೆ ಕೈಗೊಂಡು ಇರುಮುಡಿ ಹೊತ್ತುಕೊಂಡೇ ಹೋಗಿ ಬಂದಿದ್ದಾರೆ.
ಇನ್ನೂ ವಿಶೇಷವೆಂದರೆ ಒಂದೇ ಒಂದು ಬಾರಿಯೂ ಒಬ್ಬರೇ ಹೋಗಿಲ್ಲ. ಪ್ರತೀ ಬಾರಿ ಶಿಷ್ಯ ವೃಂದಕ್ಕೆ ಮಾಲೆ ಹಾಕಿ ಕರೆದುಕೊಂಡೇ ಹೋಗುತ್ತಾರೆ. ಸರಾಸರಿ ಪ್ರತೀ ತಿಂಗಳು 30 ಸ್ವಾಮಿಗಳು ನನ್ನ ಜತೆ ಇರುತ್ತಾರೆ ಎನ್ನುತ್ತಾರೆ ಶಿವಪ್ರಕಾಶ್.