LATEST NEWS
ಶೀರೂರು ಮಠದ ಲಕ್ಷ್ಮೀವರತೀರ್ಥರು ಯಾವುದೇ ತೆರಿಗೆ ವಂಚನೆ ಮಾಡಿಲ್ಲ – ಲಾತವ್ಯ ಆಚಾರ್ಯ

ಉಡುಪಿ ಡಿಸೆಂಬರ್ 10: ಶಿರೂರು ಮಠ ಆದಾಯ ತೆರಿಗೆ ವಂಚನೆ ಮಾಡಿದ್ದು ಲಕ್ಷ್ಮೀವರತೀರ್ಥರು ಕೋಟ್ಯಾಂತರ ರೂಪಾಯಿ ಆದಾಯ ತೆರಿಗೆ ಬಾಕಿ ಇಟ್ಟಿದ್ದಾರೆ ಎಂಬ ಸೋದೆ ಶ್ರೀಗಳ ಹೇಳಿಕೆಗೆ ಶಿರೂರು ಲಕ್ಷ್ಮೀವರತೀರ್ಥರ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಶೀರೂರು ಮಠದ ಲಕ್ಷ್ಮೀವರತೀರ್ಥರು ಯಾವುದೇ ತೆರಿಗೆ ವಂಚನೆ ಮಾಡಿಲ್ಲ ಎಂದು ಲಕ್ಷ್ಮೀವರತೀರ್ಥರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಹೇಳಿದ್ದಾರೆ.
ಈ ಕುರಿತಂತೆ ಉಡುಪಿಯಲ್ಲಿ ಮಾತನಾಡಿದ ಶಿರೂರು ಮಠದ ದಿವಾಣರಾಗಿದ್ದ ಲಾತವ್ಯ ಆಚಾರ್ಯ ಅವರು ಆದಾಯ ತೆರಿಗೆ ಬಾಕಿ ಬಗ್ಗೆ ಸೋದೆ ಶ್ರೀಗಳ ಹೇಳಿಕೆ ಸಂಪೂರ್ಣ ಸುಳ್ಳಾಗಿದ್ದು, ಆದಾಯ ತೆರಿಗೆ ಬಾಕಿ ಬಗ್ಗೆ ಮಾಡಿರುವ ಆರೋಪ ಸಮಂಜಸವಲ್ಲ ಎಂದರು. ಆದಾಯ ತೆರಿಗೆ ಇಲಾಖೆ ನೋಟೀಸು ಜಾರಿ ಮಾಡುವುದು ಸಹಜ ಪ್ರಕ್ರಿಯೆ, ಮಠದ ಆದಾಯಗಳನ್ನು ಮಾಧ್ಯಮಗಳಲ್ಲಿ ಬಹಿರಂಗ ಮಾಡಿದ್ದು ಸರಿಯಲ್ಲವಾಗಿದ್ದು ಇದು ದುರುದ್ದೇಶಪೂರಿತ, ಅಸಮಂಜಸ ನಡೆಯಾಗಿದೆ ಎಂದು ಆರೋಪಿಸಿದರು. ಇವರ ಹೇಳಿಕೆಯಿಂದಾಗಿ ಶಿರೂರು ಮಠದ ಅನುಯಾಯಿಗಳಿಗೆ ಬೇಸರವಾಗಿದ್ದು, ಸಮಾಜಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ಈ ಕುರಿತು ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಲಾತವ್ಯ ಆಚಾರ್ಯ ಹೇಳಿದ್ದಾರೆ.
