KARNATAKA
ಶಿರೂರು ಗುಡ್ಡ ಕುಸಿತ -ಜೀವಂತ ಸಮಾಧಿಯಾದ ಒಂದೇ ಕುಟುಂಬದ ನಾಲ್ವರು

ಕಾರವಾರ ಜುಲೈ 17 :ಉತ್ತರ ಕನ್ನಡದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಭೂಕುಸಿತಕ್ಕೆ ಕನಿಷ್ಠ 10 ಜನ ಬಲಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಇದುವರೆಗೆ 5 ಮಂದಿ ಮೃತದೇಹ ಪುತ್ತೆಯಾಗಿದೆ. ಅಂಕೋಲಾದ ಶಿರೂರು ಬಳಿ ಮಂಗಳೂರು ಗೋವಾಗೆ ಸಂರ್ಪಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ-66ರಲ್ಲಿ ಗುಡ್ಡ ಕುಸಿದು ಕನಿಷ್ಠ 10 ಮಂದಿ ಬಲಿ ಆಗಿದ್ದಾರೆ.
ಮೃತರಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಐವರಿದ್ದಾರೆ. ಇನ್ನೂ 20 ಮಂದಿ ಕಣ್ಮರೆಯಾಗಿರುವ ಶಂಕೆ ಇದ್ದು, ಭಾರೀ ಮಳೆ ನಡುವೆ ಎನ್‌ಡಿಆರ್‌ಎಫ್ ಶೋಧ ಕಾರ್ಯ ನಡೆಸಿದ್ದು, ಐವರ ಶವ ಹೊರತೆಗೆದಿದೆ.

ಜೀವನ ನಿರ್ವಹಣೆಗಾಗಿ ದೂರದ ಕಾರವಾರದಿಂದ ಬಂದು ಗಂಗಾವಳಿ ನದಿ ಬಳಿಯ ಶಿರೂರಿನಲ್ಲಿ ಟೀ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ್ ಇಡೀ ಕುಟುಂಬವೇ ಗುಡ್ಡ ಕುಸಿತಕ್ಕೆ ಬಲಿಯಾಗಿದೆ. ಇಡೀ ದಿನ ನಡೆದ ಕಾರ್ಯಚರಣೆಯಲ್ಲಿ 6 ಜನರ ಮೃತ ದೇಹ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಹೇಳಿದ್ದಾರೆ. ಮೃತರನ್ನು ಲಕ್ಷ್ಮಣ ನಾಯ್ಕ್, ಶಾಂತಿ ನಾಯ್ಕ್, ರೋಶನ್, ಅವಂತಿಕಾ, ಜಗನ್ನಾಥ ಎಂದು ಗುರುತಿಸಲಾಗಿದೆ. ಈ ನತದೃಷ್ಟ ಕುಟುಂಬದಲ್ಲಿ ಅಂತ್ಯಕ್ರಿಯೆ ಮಾಡಲೂ ಯಾರು ಉಳಿದಿಲ್ಲ.