LATEST NEWS
ಶಿರಾಢಿ ಘಾಟ್ 15 ದಿನ ಘನ ವಾಹನ ಸಂಚಾರಕ್ಕೆ ನಿಷೇಧ
ಶಿರಾಢಿ ಘಾಟ್ 15 ದಿನ ಘನ ವಾಹನ ಸಂಚಾರಕ್ಕೆ ನಿಷೇಧ
ಮಂಗಳೂರು ಜುಲೈ 16: ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಐದೂವರೆ ತಿಂಗಳಿನಿಂದ ಬಂದ್ ಮಾಡಿದ್ದ ಶಿರಾಡಿ ಘಾಟ್ ಮಾರ್ಗ ನಿನ್ನೆ ಪ್ರಾರಂಭವಾಗಿದೆ. ಆದರೆ ಸದ್ಯ ಲಘುವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 15 ದಿನಗೊಳಗಾಗಿ ಅಪಾಯಕಾರಿ ವಲಯದ ಕಾಮಗಾರಿಪೂರ್ಣಗೊಳಿಸಿದ ನಂತರ ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.
ನಿನ್ನೆ ಮಧ್ಯಾಹ್ನ 3 ಗಂಟೆಯಿಂದಲೇ ವಾಹನ ಸಂಚಾರ ಆರಂಭವಾಗಿತ್ತು. ಮೊದಲ ದಿನವೇ ಸಾವಿರಕ್ಕೂ ಅಧಿಕ ವಾಹನಗಳು ಈ ಮಾರ್ಗದಲ್ಲಿ ಸಂಚಾರ ನಡೆಸಿವೆ. ರಸ್ತೆ ಉದ್ಘಾಟನೆಯ ಮಾಹಿತಿ ತಿಳಿದಿದ್ದ ನೂರಾರು ಮಂದಿ ಈ ಮಾರ್ಗದಲ್ಲಿ ಬಂದಿದ್ದರು. ಮೊದಲ ದಿನ ಕಾರು ಬಸ್ ಕಂಟೈನರ್‌ಗಳು ಸೇರಿದಂತೆ ಎಲ್ಲ ಬಗೆಯ ವಾಹನಗಳಿಗೂ ಅವಕಾಶ ನೀಡಲಾಯಿತು.
ಆದರೆ ಎರಡನೇ ಹಂತದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿರುವ 12.38 ಕಿ.ಮೀ.ಉದ್ದದಲ್ಲಿ ರಸ್ತೆ ಬದಿಯನ್ನು (ಶೋಲ್ಡರ್) ಸಮತಟ್ಟು ಗೊಳಿಸುವ ಕೆಲಸ ಮತ್ತು ತಡೆಗೋಡೆ ನಿರ್ಮಾಣ ಬಾಕಿ ಇದೆ. ರಸ್ತೆ ಉದ್ಘಾಟನೆ ಕಾರ್ಯಕ್ರಮ ನಡೆದ ಸ್ಥಳದ ಕೆಲವೇ ದೂರದಲ್ಲಿ ಭಾರಿ ಮಳೆಯಿಂದ 30 ಮೀಟರ್‌ನಷ್ಟು ಕಾಂಕ್ರೀಟ್ ತಡೆಗೋಡೆ ಶನಿವಾರ ರಾತ್ರಿ ಕುಸಿದು ಬಿದ್ದಿದ್ದು ನದಿ ಪಾಲಾಗಿದೆ.
ಸಮಾರಂಭ ಮುಗಿದ ಕೆಲವೇ ಸಮಯದಲ್ಲಿ ಶಿರಾಡಿಯ ನಿರೀಕ್ಷಣಾ ಮಂದಿರದಲ್ಲಿ ಸಭೆ ನಡೆಸಿದ ಸಚಿವ ಯು.ಟಿ.ಖಾದರ್ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಎಸ್‌ಪಿ ಡಾ.ಬಿ.ಆರ್.ರವಿಕಾಂತೇಗೌಡ 15 ದಿನಗಳ ಕಾಲ ಘನವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರುವ ತೀರ್ಮಾನ ಕೈಗೊಂಡರು. ಅಪಾಯಕಾರಿ ವಲಯಗಳಲ್ಲಿ ಬಾಕಿ ಇರುವ ಕಾಮಗಾರಿಗಳನ್ನು 15 ದಿನಗಳೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಾಂಕ್ರೀಟ್ ರಸ್ತೆಯುದ್ದಕ್ಕೂ 50ಕಿ.ಮೀ. ವೇಗ ಮಿತಿ ನಿಗದಿಪಡಿಸಿದ್ದು. ಹಲವೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ವಾಹನಗಳ ಮೇಲೆ ನಿಗಾ ಇರಿಸಲು ನಿರ್ಧರಿಸಲಾಗಿದೆ.