LATEST NEWS
ಶಿರಾಢಿ ಘಾಟ್ ಎಲ್ಲಾ ಬಗೆಯ ವಾಹನ ಸಂಚಾರಕ್ಕೆ ಅವಕಾಶ…!
ಹಾಸನ: ಭಾರೀ ಮಳೆಯಿಂದಾಗಿ ಶಿರಾಢಿ ಘಾಟ್ ಪ್ರದೇಶದ ದೋಣಿಗಲ್ ನಲ್ಲಿ ರಸ್ತೆ ಕುಸಿತದಿಂದಾಗಿ ವಾಹನ ಸಂಚಾರಕ್ಕೆ ಹೇರಗಲಾಗಿದ್ದ ನಿರ್ಭಂದವನ್ನು ತೆಗೆದು ಹಾಕಲಾಗಿದ್ದು, ಎಲ್ಲಾ ರೀತಿಯ ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ನೀಡಿ ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75 (48) ರ ಮಾರನಹಳ್ಳಿಯಿಂದ ದೊಣಿಗಲ್‌ವರಗಿನ ಹಾಸನ ಜಿಲ್ಲಾ ವ್ಯಾಪ್ತಿಯ ಶಿರಾಡಿ ಘಾಟ್ ರಸ್ತೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸೆ. 28 ರಿಂದ ಜಾರಿಗೆ ಬರುವಂತೆ ಎಲ್ಲಾ ಬಗೆಯ ಲಘು ಹಾಗೂ ಭಾರಿ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಮುಕ್ತಗೊಳಿಸಿದ್ದಾರೆ.
ಶಿರಾಡಿ ಘಾಟಿ ಪ್ರದೇಶ ಮತ್ತು ಸಕಲೇಶಪುರ ವ್ಯಾಪ್ತಿಯಲ್ಲಿ ಭಾರಿ ಮಳೆಯಾದ ಪರಿಣಾಮ ದೋಣಿಗಲ್ ಸಮೀಪ ಹೆದ್ದಾರಿಗೆ ತಾಗಿಕೊಂಡಿರುವ ಬರೆ ಕುಸಿಯಲು ಆರಂಭಿಸಿ, ಕೊನೆಗೊಮ್ಮೆ ಜುಲೈ 22 ರಂದು ಸಂಪರ್ಕ ಕಡಿತಗೊಂಡಿತ್ತು. ಈ ಸಂದರ್ಭದಲ್ಲಿ ಪರ್ಯಾಯವಾಗಿ ಬಿಸಲೆ ಘಾಟಿ ರಸ್ತೆ ಮತ್ತು ಚಾರ್ಮಾಡಿ ಮೂಲಕ ತೆರಳಲು ಸೂಚಿಸಲಾಗಿತ್ತು.
ಸಕಲೇಶಪುರ ಮೂಲಕ ಹೋಗುವ ರಸ್ತೆ ಸಂಚಾರ ಸ್ಥಗಿತವಾಗಿದ್ದರಿಂದ ಬಿಸಲೆ ಘಾಟ್ ಮತ್ತು ಚಾರ್ಮಾಡಿ ಘಾಟ್ ರಸ್ತೆ ಬಳಸಲು ಸೂಚಿಸಲಾಗಿದ್ದರೂ ಭಾರೀ ಗಾತ್ರದ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಕಷ್ಟ ಸಾಧ್ಯವಾಗಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಭಾರಿ ತೊಂದರೆ ಅನುಭವಿಸುತ್ತಿದ್ದರು. ಇದಕ್ಕೀಗ ಮುಕ್ತಿ ಸಿಕ್ಕಿದೆ.