BANTWAL
ನ್ಯಾಯಾಲಯದ ನಿರ್ದೇಶನ ಬೆನ್ನಲ್ಲೇ ಸಂಪ್ರದಾಯದಂತೆ ನಡೆದ ಶಂಭೂರು ನೇಮೋತ್ಸವ

ಬಂಟ್ವಾಳ ಮಾರ್ಚ್ 05: ಇತ್ತೀಚೆಗೆ ಎರಡು ಗುಂಪುಗಳ ನಡುವಿನ ಕಿತ್ತಾಟ ಹಾಗೂ ರಾಜಕೀಯಕ್ಕೆ ಅರ್ಧಕ್ಕೆ ನಿಂತಿದ್ದ ಶಂಭೂರು ಗ್ರಾಮದ ಅಲಂಗಾರ ಮಾಡ ಕಲ್ಲಮಾಳಿಗೆ ಇಷ್ಟದೇವತಾ ಅರಸು ಮುಂಡಿತ್ತಾಯ ದೈವಸ್ಥಾನದಲ್ಲಿ ಧರ್ಮರಸು ನೇಮೋತ್ಸವವು ಸಂಪ್ರದಾಯದಂತೆ ಬರ್ಕೆ ವಲಸರಿಯೊಂದಿಗೆ ಗುರುವಾರ ರಾತ್ರಿ ನಡೆಯಿತು.
ಮಾರ್ಚ್ 9ರಿಂದ 11ರವರೆಗೆ ನಡೆಯಬೇಕಿದ್ದ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ, ವೈದ್ಯನಾಥ ದೈವಸ್ಥಾನದ ನೇಮೋತ್ಸವ ಎರಡು ಬಣಗಳ ರಾಜಕೀಯ ಕಿತ್ತಾಟದಿಂದ ಪೊಲೀಸರೊಂದಿಗೆ ಬಂದು ಧಾರ್ಮಿಕ ದತ್ತಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈಚೆಗೆ ನೇಮೋತ್ಸವವನ್ನು ಸ್ಥಗಿತಗೊಳಿಸಿದ್ದರು. ಗ್ರಾಮಕ್ಕೆ ಸಂಬಂಧಿಸಿದ ನೇಮೋತ್ಸವ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಇತ್ತೀಚೆಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಈ ಬಗ್ಗೆ ಅರಸು ವೈದ್ಯನಾಥ ಜುಮಾದಿ ಬಂಟ ದೈವಗಳ ಆರಾಧನಾ ಸಮಿತಿ ಅಧ್ಯಕ್ಷ ನವೀನ್ ಕೋಟ್ಯಾನ್, ಅಲಂಗಾರಮಾಡ ಕಲ್ಲಮಾಳಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಪ್ರಸಾದ್, ಅಡೆಪಿಲ ಭಂಡಾರದ ಮನೆ ಟ್ರಸ್ಟ್ ಅಧ್ಯಕ್ಷ ಮೀನ ಭಗವಾನ್ ದಾಸ್ ಮತ್ತು ಜೋಡುಸ್ಥಾನ ದೈವಸ್ಥಾನ ಮುಖ್ಯಸ್ಥ ಎನ್.ಸೀತಾರಾಮ ಪೂಜಾರಿ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಇದೀಗ ಈ ರಿಟ್ ಅರ್ಜಿ ಪುರಸ್ಕರಿಸಿದ ನ್ಯಾಯಾಲಯವು ಸಂಬಂಧಪಟ್ಟ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ‘ಯಾವುದೇ ಅಡ್ಡಿ ಇರದಂತೆ ನೇಮೋತ್ಸವ ನಡೆಸಲು ಆದೇಶಿಸಿದೆ’ ಎಂದು ತಿಳಿಸಿತ್ತು. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಗ್ರಾಮಾಂತರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದ ಪೊಲೀಸರು ಬಂದೋಬಸ್ತು ಮಾಡಿದ್ದರು.