Connect with us

    ಶಬರಿಮಲೆಯ ಸ್ವಾಮಿಯೇ ಶರಣಂ ಅಯ್ಯಪ್ಪ

    ಶಬರಿಮಲೆಯ ಸ್ವಾಮಿಯೇ ಶರಣಂ ಅಯ್ಯಪ್ಪ

    ಶಬರಿಮಲೆ: ಸ್ವಾಮಿ ಶರಣಂ. ಅಯ್ಯಪ್ಪ ಶರಣಂ. ಸಾವಿರ ಸಾವಿರ ಕೊರಳುಗಳಿಂದ ಶರಣು ಶರಣೆನ್ನುವ ಘೋಷ ಹೊರಹೊಮ್ಮುತ್ತದೆ.

    ಶರಣೆನ್ನುವ ಆ ವಿನೀತ ಭಾವಕ್ಕೆ ಮನುಷ್ಯರು ಮಾತ್ರವಲ್ಲ– ಗಿಡಗಂಟೆಗಳ ಕೊರಳುಗಳೂ ಜೊತೆಯಾದಂತೆ ಕಾಣಿಸುತ್ತವೆ.

    ವಿನೀತಭಾವದಿಂದ ಮನಸ್ಸು ಆರ್ದ್ರಗೊಳ್ಳುವ ಕ್ಷಣವದು.

    ಇಂಥ ಅಪರೂಪದ ಮಾನವೀಯ ಕ್ಷಣಗಳಿಗೆ ಶಬರಿಮಲೆ, ಅಲ್ಲಿನ ಪರಿಸರ, ಅಯ್ಯಪ್ಪ ಎನ್ನುವ ದೈವ ಎಲ್ಲರೂ ಕಾರಣರಾಗುತ್ತಾರೆ, ಸಾಕ್ಷಿಯಾಗುತ್ತಾರೆ.

    ಶಬರಿಮಲೆ ಕೇರಳದಲ್ಲಿರುವ ಒಂದು ಹಿಂದೂ ಪುಣ್ಯ ಕ್ಷೇತ್ರ.

    ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ.

    ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಸಾಸ್ತಾ ದೇವಾಲಯಗಳಲ್ಲಿ ಒಂದಾಗಿದೆ.

    ಶಬರಿಮಲೆಯ ದೇವಾಲಯ ದಕ್ಷಿಣ ಭಾರತದ ಅತ್ಯಂತ ದೂರದ ದೇವಾಲಯಗಳಲ್ಲಿ ಒಂದಾಗಿದೆ ಆದರೂ ಮೂರು ನಾಲ್ಕು ದಶಲಕ್ಷದಷ್ಟು ಯಾತ್ರಿಗಳು ಪ್ರತಿ ವರ್ಷ ಸೆಳೆಯುತ್ತದೆ.

    ಪರ್ವತಗಳನ್ನು ಮತ್ತು ದಟ್ಟವಾದ ಅರಣ್ಯದಿಂದ ಸುತ್ತುವರೆದಿದೆ.

    ಬಹುಶಃ ಕೇರಳದೆ ಅತ್ಯುತ್ತಮ ತೀರ್ಥಯಾತ್ರಾ ಸ್ಥಳವಾಗಿದೆ ಶಬರಿಮಲೆ ಆಗಿದೆ.

    ತೀರ್ಥಯಾತ್ರೆ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಜನವರಿ ಕೊನೆಯಾಗುತ್ತದೆ .

    ದೇವಾಲಯದ ಭಾರತದ ದಕ್ಷಿಣ ರಾಜ್ಯಗಳ ,ದೇಶದ ಮತ್ತು ವಿದೇಶದಲ್ಲಿ ಇತರ ಭಾಗಗಳಿಂದ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.

    ಶಬರಿಗಿರಿಯ ಯಾತ್ರೆ ಹಾಗೂ ಅಯ್ಯಪ್ಪನ ಆರಾಧನೆಯನ್ನು ಭಕ್ತಿಯ ಅಭಿವ್ಯಕ್ತಿಯ ರೂಪದಲ್ಲಷ್ಟೇ ನೋಡಹೋದರೆ ಅದು ಇಡೀ ಪ್ರಕ್ರಿಯೆಯ ಒಂದು ಆಯಾಮವನ್ನಷ್ಟೇ ನೋಡಿದಂತಾಗುತ್ತದೆ.

    ಈ ಯಾತ್ರೆಗೆ, ಭಕ್ತಿಯ ಅಭಿವ್ಯಕ್ತಿಗೆ ಮಾನವೀಯ ಆಯಾಮವೂ ಇದೆ.

    ಕೆಲವು ದಿನಗಳ ಕಾಲವಾದರೂ ನಮ್ಮ ಅಹಂ ಅನ್ನು ಇಲ್ಲವಾಗಿಸುವ, ದೇಹಕ್ಕೆ ಸಂಯಮದ ಪಾಠ ಕಲಿಸುವ, ದಿನಚರಿಯನ್ನು ಅದ್ಭುತ ಶಿಸ್ತಿಗೆ ಒಗ್ಗಿಸುವ ಪ್ರಕ್ರಿಯೆ ಇದು.

    ಲಕ್ಷ ಲಕ್ಷ ಜನ ಅಯ್ಯಪ್ಪನಿಗೆ ಶರಣೆನ್ನುತ್ತ, ಶಬರಿಗಿರಿಯಲ್ಲಿ ನೆರೆಯುವ ವಿಧಾನ ಕುಂಭಮೇಳವನ್ನು ನೆನಪಿಸುತ್ತದೆ.

    ಕುಂಭಮೇಳದಲ್ಲಿ ಕಾಣುವಂತಹದ್ದೇ ಅಚ್ಚುಕಟ್ಟು ನಿರ್ವಹಣೆ ಇಲ್ಲೂ ಇದೆ.

    ಅಯ್ಯಪ್ಪನ ಆರಾಧನೆಯ ದಿನಗಳಾದರೂ ಎಂಥವು? ಸೂರ್ಯ ಮೇಲೇರುವವರೆಗೂ ದೇಹಪೂರ್ತಿ ಹೊದಿಕೆ ಹೊದ್ದು ಮಲಗುವಂಥ ಗದಗುಟ್ಟಿಸುವ ಚಳಿ ದಿನಗಳವು.

    ಕಸರತ್ತು ಮಾಡಿ ಹುರಿಗಟ್ಟಿದ ಮೈಯನ್ನೂ ನಡುಗಿಸುವ ಈ ಚಳಿಗೆ ಭಕ್ತಿಯ ಸವಾಲು.

    ರಕ್ತವನ್ನು ಹೆಪ್ಪುಗಟ್ಟಿಸುವಂಥ ನಸುಕಿನ ತಣ್ಣನೆ ನೀರಿನಲ್ಲಿ ಮೀಯುವ ದೇಹಕ್ಕೆ ಅಯ್ಯಪ್ಪನ ಜಪವೇ ಕಾವು ತರುತ್ತದೆ.

    ಬರಿಗಾಲಿನ ನಡಿಗೆಯ ಬಾಧೆಯನ್ನೂ ದೇಹ ಸಹಿಸಿಕೊಳ್ಳುತ್ತದೆ.

    ಸ್ವಯಂ ಅಡುಗೆ ಸಿದ್ಧಪಡಿಸಿಕೊಂಡು, ಹಂಚಿಕೊಂಡು ಉಣ್ಣುವ ಸಹಬಾಳ್ವೆಯ ಬದುಕು ಮಾನವೀಯತೆಯ ಬಗ್ಗೆ ಮತ್ತೆ ನಂಬಿಕೆ ಮೂಡಿಸುತ್ತದೆ.

    ಜೀವನವಿಡೀ ಶಿಸ್ತಿಗೆ ಬೆನ್ನು ಹಾಕಿ ಬದುಕುವಾತನೂ ಭಕ್ತಿಯ ವ್ಯೂಹಕ್ಕೆ ಸಿಲುಕಿದಾಗ ತನ್ನನ್ನು ಅದರಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡಲಾರ.

    ಅದುವರೆಗೆ ಇಷ್ಟದಿಂದ ಸೇವಿಸುವ ಮಾಂಸಾಹಾರವನ್ನು ತ್ಯಜಿಸುತ್ತಾನೆ.

    ಖುಷಿಗೋ, ದುಃಖಕ್ಕೋ ತನ್ನ ಆಪ್ತಸಂಗಾತಿಯಂತೆ ಪ್ರೀತಿಸುವ ಅಮಲಿನ ಮದ್ಯದಿಂದ ದೂರಸರಿಯುತ್ತಾನೆ.

    ಮಾತು–ಮನಸಿನಲ್ಲಿ ದೇವರ ಸ್ಮರಣೆಯೇ ತುಂಬಿಕೊಳ್ಳುತ್ತದೆ. ದೊಡ್ಡ ಪವಾಡದ ನಿರೀಕ್ಷೆ ಆತನಲ್ಲಿಲ್ಲ.

    ಆದರೂ ಕಠಿಣ ಕಟ್ಟುಪಾಡಿನ ವ್ರತದ ಬಂಧನಕ್ಕೆ ಸ್ವ ಇಚ್ಛೆಯಿಂದ ಸಿಲುಕಿಕೊಳ್ಳುತ್ತಾನೆ.

    ರುದ್ರ–ರಮಣೀಯ ಯಾತ್ರೆ :
    ಕಡಿದಾದ ಬೆಟ್ಟದಲ್ಲಿ ತಲೆಯೆತ್ತಿ ನಿಂತ ಮುಗಿಲ ಚುಂಬಿಸುತ್ತಿರುವ ಮರಗಳದ್ದು ಮೌನ ವ್ರತ.

    ದಟ್ಟಾರಣ್ಯದೊಳಗೆ ಕಗ್ಗತ್ತಲು ಮೂಡಿಸಿರುವ ರುದ್ರ ನಿಶ್ಶಬ್ದವನ್ನು ಸೀಳಿ ಸಾವಿರಾರು ಗುಂಪಿನ ವಿಭಿನ್ನ ಸಮೂಹ ಸ್ವರಗಳಲ್ಲಿ ಹೊರಹೊಮ್ಮುವ ಜಪ ಒಂದೇ– ‘ಸ್ವಾಮಿಯೇ ಅಯ್ಯಪ್ಪ…, ಶರಣಂ ಅಯ್ಯಪ್ಪ…’.

    ಅಸಂಖ್ಯಾತ ಚುಕ್ಕಿಗಳನ್ನು ಹೊತ್ತ ನಭೋಮಂಡಲಕ್ಕೂ ಬೆರಗು ಮೂಡಿಸುವಂತೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಾಗುವ ಭಕ್ತರ ದಂಡಿನ ಮೈಮನಗಳಲ್ಲಿ ಭಕ್ತಿಯ ಹರಿವು.

    ದಟ್ಟಡವಿಯಲ್ಲಿ ಕಿರಿದಾದ ಕಾಲುಹಾದಿಯಿಂದ ಕೆಳಕ್ಕೊಮ್ಮೆ ಕಣ್ಣುಹಾಯಿಸಿದರೆ ಎದೆ ಉಡುಗಿಸುವ ಪಾತಾಳ.

    ಮೇಲಿನಿಂದ ನೋಡಿದರೆ ಕಪ್ಪು ಇರುವೆಗಳಂಥ ಸಾಲು.

    ಅದು ವನ್ಯಮೃಗಗಳ ಆವಾಸ ಸ್ಥಾನ. ಆದರೆ, ಹುಲಿ, ಆನೆಗಳ ಹಸಿ ವಾಸನೆ, ಹೆಜ್ಜೆ ಗುರುತುಗಳು ಯಾತ್ರಿಕರಿಗೆ ದಿಗಿಲು ಹುಟ್ಟಿಸಲಾರವು.

    ನಡುನಡುವೆ ವಿಶ್ರಾಂತಿ ಪಡೆಯಲೆಂದೇ ಮಾಡಲಾದ ಸಮತಟ್ಟಾದ ಜಾಗದಲ್ಲಿ ವಿರಮಿಸಿಕೊಳ್ಳುವವರು ಕೆಲವರು.

    ಇನ್ನು ಕೆಲವರಿಗೆ ಆಯಾಸದ ಅನುಭವವೇ ಇಲ್ಲ.

    ಹಸಿವು, ನಿದ್ದೆ ಇದಾವುದರ ಪರಿವೇ ಇಲ್ಲ. ಬೆಟ್ಟದ ದುರ್ಗಮ ಹಾದಿಯನ್ನು ಸಲೀಸಾಗಿ ಸವೆಸುವ ಅವರ ದೇಹ ಮತ್ತು ಮನಸಿನಲ್ಲಿ ಅದಮ್ಯ ಚೇತನ.

    ದೈವದ ದರ್ಶನಕೆ ತುಡಿಯುತ್ತಿರುವ ಮನಸಿನ ಉದ್ವೇಗವನ್ನು ಅರ್ಥಮಾಡಿಕೊಂಡಂತೆ ದೇಹ ತನ್ನಂತಾನೇ ಸ್ಪಂದಿಸುತ್ತಿದೆ.

    ಇಹದ ಕಾರ್ಪಣ್ಯಗಳು ಅವರೊಂದಿಗೆ ಬಂದಿಲ್ಲ. ತನ್ನ ಮುಂದಿರುವವನು ಯಾವ ಜಾತಿಯವನು ತಿಳಿದಿಲ್ಲ.

    ಹಿಂದೆ ತನ್ನನ್ನು ಹಿಂಬಾಲಿಸುತ್ತಿರುವವನು ಯಾವ ಭಾಷಿಗನೆಂದು ಗೊತ್ತಿಲ್ಲ.

    ಅವರೆಲ್ಲರದೂ ಒಂದೇ ಜಾತಿ, ಒಂದೇ ಭಾಷೆ, ಒಂದೇ ಗುರಿ.

    ಅಯ್ಯಪ್ಪನ ಸ್ಮರಣೆಯ ಹೊರತಾಗಿ ಬೇರೊಂದು ಯೋಚನೆ ಅವರ ಮನದೊಳಗೆ ಸುಳಿಯುವುದೂ ಇಲ್ಲ. ಭಕ್ತಿ ಪರವಶತೆಯ ಪ್ರತೀಕವದು.

    ಭಕ್ತಿಯ ಡಯೆಟ್‌ :
    ಒಪ್ಪತ್ತು ಊಟ, ಎರಡು ಹೊತ್ತು ಫಲಾಹಾರ ಬಿಟ್ಟರೆ ಬೇಕೆನಿಸಿದಾಗೆಲ್ಲಾ ಹೊಟ್ಟೆ ತುಂಬ ತಿನ್ನುವ ಮಾತು ಅಲ್ಲಿಲ್ಲ.

    ಊರ ದೇಗುಲದ ಬಳಿ ವಾಸಿಸುವ ಭಕ್ತರಲ್ಲಿ ಇಂಥವರೇ ಒಲೆಹಚ್ಚಬೇಕು ಎಂಬ ನಿಯಮವಿಲ್ಲ, ಅವರ ಕೈಯಡುಗೆ ತಿನ್ನುವುದಿಲ್ಲ ಎಂಬ ಮಡಿವಂತಿಕೆಯಿಲ್ಲ.

    ಬೆಟ್ಟ ಹತ್ತುವಾಗ ಅಲ್ಲಲ್ಲೇ ವಿರಮಿಸಿ ಒಲೆ ಹಚ್ಚಿ ಊಟ ಸಿದ್ಧಪಡಿಸುತ್ತಾರೆ.

    ಕನ್ನಿ ಸ್ವಾಮಿ (ಮೊದಲ ಬಾರಿ ಮಾಲೆ ಧರಿಸಿರುವವರು) ಒಟ್ಟು ನೂರಾ ಒಂದು ಒಲೆಗಳಿಂದ ಭಸ್ಮವನ್ನು ಸಂಗ್ರಹಿಸಬೇಕು.

    ಅಡುಗೆ ಬೇಯುತ್ತಿರುವಾಗಲೇ ಕನ್ನಿ ಸ್ವಾಮಿ ಅದರಿಂದ ಬೂದಿ ಹೊರತೆಗೆಯುತ್ತಾರೆ.

    ಅಪರಿಚಿತರಾದರೂ, ಬೆಂಕಿ ಕೆಟ್ಟುಹೋದರೂ ಅವರಾರೂ ಚಿಕ್ಕ ತಕರಾರನ್ನೂ ತೆಗೆಯುವುದಿಲ್ಲ.

    ಮಾಲೆ ಧರಿಸಿ ‘ಸ್ವಾಮಿ’ ಆಗುವ ಅನೇಕರ ಬಳಿ ಶಬರಿಮಲೆಗೆ ಹೋಗುವುದಕ್ಕಿರಲಿ, ಇರುಮುಡಿ ಕಟ್ಟುವುದಕ್ಕೂ ಹಣವಿರುವುದಿಲ್ಲ.

    ಅಂಥವರನ್ನು ಹಿರಿಯ ಭಕ್ತರು ತಾವೇ ಹಣ ಹೊಂಚಿಕೊಂಡು ಕರೆದುಕೊಂಡು ಹೋಗುತ್ತಾರೆ.

    ಕೆಲವರು ಭಕ್ತಿಯ ದೇಣಿಗೆ ಸಂಗ್ರಹಿಸಿ ಯಾತ್ರೆ ಕೈಗೊಳ್ಳುವುದೂ ಇದೆ.

    ಅಯ್ಯಪ್ಪನ ಸಾನ್ನಿಧ್ಯಕ್ಕೆ ತೆರಳುವ ಮಾರ್ಗಮಧ್ಯೆ ಅನ್ನದಾನದ ಪ್ರಸಾದಗಳೂ ಸಿಗುತ್ತವೆ.

    ಬದುಕಿನ ಪಾಠಗಳು :
    ಭಕ್ತಿಯೆಂದರೆ ಕೇವಲ ಭಕ್ತಿಯಲ್ಲ, ಅದೊಂದು ಬದುಕಿನ ಪದ್ಧತಿ. ಹೇಗೆ ಬದುಕಬೇಕು ಎಂಬ ಶಿಕ್ಷಣ ನೀಡುವ ಅಮೂರ್ತ ಶಾಲೆ.

    ಅಯ್ಯಪ್ಪ ಸ್ವಾಮಿಯ ಆರಾಧಕರಿಗೆ ಯಾತ್ರೆಗೂ ಮುನ್ನವೇ ‘ಮಾಲೆ’ ಹಾಕುವುದರಿಂದ ಪ್ರಾರಂಭವಾಗುವ ನಿಯಮಾವಳಿಗಳಲ್ಲಿ ಕೆಲವೊಂದಕ್ಕೆ ಭಕ್ತಿಯ ಲೇಪ, ಕೆಲವಕ್ಕೆ ಬದುಕಿನ ಲೇಪ.

    ಸನ್ಯಾಸತ್ವ ತೆಗೆದುಕೊಳ್ಳದೆ ಸಹಜ ಮನುಷ್ಯನಂತೆ ಬದುಕುತ್ತಲೇ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವ ಸವಾಲನ್ನು ಯಶಸ್ವಿಯಾಗಿ ಪೂರೈಸುವ ಭಕ್ತನ ಮೂಲಕ ಅದರ ಸಾಧ್ಯತೆಗಳನ್ನು ತೆರೆದಿಡುತ್ತದೆ.

    ಕುಡಿತ, ಧೂಮಪಾನ ಮುಂತಾದ ದುಶ್ಚಟಗಳ ದಾಸರಾದವರು ವ್ರತಾಚರಣೆಯ ಅವಧಿಯುದ್ದಕ್ಕೂ ಅದನ್ನು ತ್ಯಜಿಸಿರುತ್ತಾರೆ ಎಂದರೆ ಅದೊಂದು ಸಾಧನೆಯೇ ಅಲ್ಲವೇ?

    ಹೀಗೆ ನಿಯಮದ ಕಾರಣಕ್ಕೆ ದುಶ್ಚಟ ತ್ಯಜಿಸಿದವರು ಸಂಪೂರ್ಣವಾಗಿ ಅದರಿಂದ ಹೊರಬಂದ ನಿದರ್ಶನಗಳೂ ಸಾಕಷ್ಟಿವೆ.

    ಇರುಮುಡಿ ಕಟ್ಟುವ ದಿನದ ಮೂರು ದಿನದ ಹಿಂದಷ್ಟೇ ಮಾಲೆ ಧರಿಸುವವರಿದ್ದಾರೆ.

    41 ಅಥವಾ ಅದಕ್ಕೂ ಹೆಚ್ಚು ದಿನ ಕಠಿಣ ವ್ರತಾಚರಣೆ ಮಾಡುವವರೂ ಇದ್ದಾರೆ.

    ಈ ದೀರ್ಘಾವಧಿ ವ್ರತದ ಉದ್ದೇಶ ಶಬರಿಮಲೆಯ ದಟ್ಟ ಕಾನನದೊಳಗೆ ಹಗಲು–ರಾತ್ರಿ ಚಳಿಯಲ್ಲಿ ಸಾಗಲು ಶಕ್ತವಾಗುವಂತೆ ದೇಹವನ್ನು ಹದಗೊಳಿಸುವುದು.

    ಇಂದ್ರಿಯ ನಿಗ್ರಹದ ಈ ವ್ರತ ‘ಕುಟುಂಬ ಯೋಜನೆ’ಯ ತಂತ್ರವೂ ಹೌದು ಎನ್ನುವ ಅಭಿಪ್ರಾಯವಿದೆ.

    ದೇವ ಸ್ಮರಣೆಯಲ್ಲಿನ ಏಕಾಗ್ರತೆ, ಶುಚಿತ್ವ ಇವೆಲ್ಲವೂ ಜೀವನ ಪಾಠಗಳು.

    ಏಕತೆಯ ಮಂತ್ರ:
    ಸ್ಥಳೀಯರಾದ ಕೇರಳಿಗರು, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮಾತ್ರವಲ್ಲ, ದೇಶದ ಉತ್ತರ ದಿಕ್ಕಿನಿಂದಲೂ, ಸಾಗರದಾಚೆಯ ನಾಡಿನಿಂದಲೂ ಕಪ್ಪುವಸ್ತ್ರ ಧರಿಸಿ ಮಲೆಗಳನ್ನು ದಾಟುವವರಿದ್ದಾರೆ.

    ಕಪ್ಪುವಸ್ತ್ರ ಶನಿಯನ್ನು ಹಿಮ್ಮೆಟ್ಟಿಸುವ ಸಂಕೇತವಂತೆ. ಕಾಡಿನಲ್ಲಿ ಮೃಗಗಳು ಕೆರಳುವುದನ್ನು ತಡೆಯಲೂ ಕಪ್ಪು ಬಟ್ಟೆ ಧರಿಸಲಾಗುತ್ತದೆ ಎನ್ನುತ್ತಾರೆ.

    ಅಯ್ಯಪ್ಪನ ಸನ್ನಿಧಿಗೆ ಹೋಗುವ ಮಧ್ಯದಲ್ಲಿ ಸಿಗುವ ವಾವರ್‌ ಸ್ವಾಮಿ ದರ್ಗಾ ಧರ್ಮ ಸಹಿಷ್ಣುತೆಯ ಸಂಕೇತ.

    ಅಯ್ಯಪ್ಪ ಸ್ವಾಮಿ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ವಾವರ್‌ ಸ್ವಾಮಿ ಇಬ್ಬರೂ ಗೆಳೆಯರೆಂಬ ಪ್ರತೀತಿ.

    ಕಟ್ಟುನಿಟ್ಟಾಗಿ ವ್ರತಾಚರಣೆ ಮಾಡಿ ದರ್ಶನಕ್ಕೆ ಬರುವ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಭಕ್ತರ ಸಂಖ್ಯೆಯೂ ಕಡಿಮೆಯಿಲ್ಲ.

    ಯೇಸುದಾಸ್‌ ಹಾಡಿರುವಷ್ಟು ಸಂಖ್ಯೆಯ ಅಯ್ಯಪ್ಪ ಸ್ವಾಮಿ ಭಕ್ತಿಗೀತೆಗಳನ್ನು ಬೇರಾವ ಗಾಯಕರೂ ಹಾಡಿಲ್ಲ.

    ಮೊದಲ ಬಾರಿಗೆ ಮಾಲೆ ಹಾಕುವ ಯಜಮಾನನಿಗೆ ಹಲವು ವರ್ಷಗಳಿಂದ ಮಾಲೆ ಹಾಕುತ್ತಿರುವ ಆತನ ಜವಾನನೇ ‘ಗುರುಸ್ವಾಮಿ’ ಆಗಬಹುದು.

    ಎಷ್ಟೇ ಸಿರಿವಂತನಾದರೂ ಅಯ್ಯಪ್ಪನ ಸನ್ನಿಧಾನದಲ್ಲಿ ಆತ ಶ್ರೀಸಾಮಾನ್ಯ.

    ಹೆಚ್ಚೆಂದರೆ ಆತನ ಬಳಿ ಹೆಚ್ಚು ಹಣವಿರಬಹುದು ಅಷ್ಟೇ. ಎಲ್ಲರಂತೆಯೇ ಆತ ಬೆಟ್ಟವನ್ನೇರಬೇಕು, ಪಂಪಾ ನದಿಯಲ್ಲಿ ಮುಳುಗೇಳಲೇ ಬೇಕು,

    ವಿಭೂತಿ ಧರಿಸಿ ಎಲ್ಲರಂತೆ ಪ್ರಸಾದ ಸ್ವೀಕರಿಸಲೇಬೇಕು, ತನಗಿಂತ ಕಿರಿಯನಿಗೆ ನಮಸ್ಕರಿಸಲೇಬೇಕು.

    ಇರುಮುಡಿ ಹೊತ್ತಾಗ ಹದಿನೆಂಟು ಮೆಟ್ಟಿಲನ್ನು ಏರಿಯೇ ಸಾಗಬೇಕು.

    ಮಧ್ಯರಾತ್ರಿಯಿಂದಲೇ ದರ್ಶನಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಲೇಬೇಕು.

    ಅನ್ಯದೇವರಂತೆ ಇಲ್ಲಿ ವಿಐಪಿ ಕೋಟಾ ಇಲ್ಲ! ಗುರುಸ್ವಾಮಿಯ ಮಾತಿಗೆ ಎಲ್ಲರೂ ಬದ್ಧ.

    ಆದರೆ ಮಣಿಕಂಠ ಸ್ವಾಮಿಯ (ಮಾಲೆ ಧರಿಸಿದ ಪುಟ್ಟ ಬಾಲಕರು) ಅಪೇಕ್ಷೆಗಳನ್ನು ಸ್ವತಃ ಗುರುಸ್ವಾಮಿ ಮೀರುವಂತಿಲ್ಲ.

    ಇಂಥ ವಿಶಿಷ್ಟ ಪದ್ಧತಿಯನ್ನು ಬಹುಶಃ ಬೇರೆಲ್ಲೂ ಕಾಣಲು ಅಸಾಧ್ಯ.

    ಜ್ಯೋತಿಯ ಬೆರಗು :
    ಕೇರಳದ ಶಬರಿಮಲೆಯಲ್ಲೀಗ ‘ಮಕರವಿಳಕ್ಕು’ ಸಂಭ್ರಮ.

    ಪ್ರತಿ ವರ್ಷದ ಮಕರ ಸಂಕ್ರಾಂತಿ ಹಬ್ಬದ ದಿನ ಶಬರಿಮಲೆಯ ಪೊನ್ನಂಬಲ ಮೇಡು ಬೆಟ್ಟದ ತುದಿಯಲ್ಲಿ ಕಾಣಿಸಿಕೊಳ್ಳುವ ಬೆಳಕೇ ‘ಮಕರವಿಳಕ್ಕು’ ಹೆಸರಿನ ದೀಪ.

    ಮೂರು ಸಲ ಮಿನುಗಿ ಮಾಯವಾಗುವ ಈ ಜ್ಯೋತಿಯ ಬಗ್ಗೆ ಕಥೆಗಳೂ ವಾದವಿವಾದಗಳೂ ಇವೆ.

    ‘ಮಕರ ಜ್ಯೋತಿ’ ದೈವಿಕವಾದುದೇನೂ ಅಲ್ಲ, ಅದು ಮಾನವ ನಿರ್ಮಿತ ಎನ್ನುವುದು ವಿಚಾರವಾದಿಗಳ ಪ್ರತಿಪಾದನೆ.

     

    ಈ ಜ್ಯೋತಿ ಮಾನವನಿರ್ಮಿತ ಎಂದು ‘ತಿರುವಾಂಕೂರು ದೇವಸ್ಥಾನ ಮಂಡಳಿ’ಯ (ಟಿಡಿಬಿ) ಮಾಜಿ ಆಯುಕ್ತರೊಬ್ಬರು ಹೇಳ್ದಿದಾರೆ.

    ಅವರ ಹೇಳಿಕೆಯ ಪ್ರಕಾರ- ‘ಪ್ರತಿವರ್ಷ ಮಕರ ಸಂಕ್ರಾಂತಿಯ ದಿನ ಶಬರಿಮಲೆಯ ಪೊನ್ನಂಬಲ ಮೇಡು ಬೆಟ್ಟದ ತುದಿಯಲ್ಲಿ ‘ಮಕರವಿಳಕ್ಕು’ ದೀಪವನ್ನು ತಿರುವಾಂಕೂರು ದೇವಸ್ವಂ ಮಂಡಳಿಯೇ ಬೆಳಗಿಸುತ್ತದೆ.

    ಈ ಜ್ಯೋತಿಗೆ ನಲವತ್ತೈದು ವರ್ಷಗಳ ಇತಿಹಾಸವಷ್ಟೇ ಇದೆ.

    ಮೊದಲಿಗೆ ಈ ಜ್ಯೋತಿಯನ್ನು ಪೊನ್ನಂಬಲ ಮೇಡು ಪರಿಸರದ ಬುಡಕಟ್ಟು ಪಂಗಡದ ಕೆಲವು ಕುಟುಂಬಗಳು ಬೆಳಗಿಸುತ್ತದ್ದವು.

    ಶಬರಿಗಿರಿ ಜಲವಿದ್ಯುತ್ ಯೋಜನೆಯಡಿ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಿದ ಮೇಲೆ ದೀಪಾರಾಧನೆ ಕೇರಳ ವಿದ್ಯುತ್ ನಿಗಮದ ಪಾಲಿಗೆ ಬಂತು.

    ಆನಂತರ ದೇವಸ್ವಂ ಮಂಡಳಿ ಹಾಗೂ ಪೊಲೀಸ್ ಇಲಾಖೆಗೆ ಜ್ಯೋತಿ ಹಸ್ತಾಂತರಗೊಂಡಿದೆ’.

    ದೇವಸ್ಥಾನದ ಪ್ರಧಾನ ಅರ್ಚಕರು ಹೇಳುವುದೇ ಬೇರೆ.

    ಅವರ ಪ್ರಕಾರ, ಮಕರ ಜ್ಯೋತಿ ಎನ್ನುವುದು ಆಕಾಶದಲ್ಲಿನ ಒಂದು ಪ್ರಭಾವಶಾಲಿ ತಾರೆ.

    ಕಥೆಗಳ ಪ್ರಕಾರ– ಅಯ್ಯಪ್ಪ ಸ್ವಾಮಿಯ ಆಭರಣಗಳನ್ನು ಗರುಡ ತೆಗೆದುಕೊಂಡು ಹೋಗುವ ದೃಶ್ಯವೇ ಮಕರಜ್ಯೋತಿ.

    ಅಂದರೆ ದೇವತೆಗಳ ಕಣ್ಣಾಮುಚ್ಚಾಲೆ ಆಟದ ಕಿಡಿಯಿದು.

    ಸಂಕ್ರಮಣದ ದಿನ ಬೆಟ್ಟದ ಮೇಲೆ ‘ಮಕರ ಜ್ಯೋತಿ’ಯನ್ನು ಒಂದು ಗುಂಪು ಬೆಳಗಿಸುತ್ತದೆ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ ಬುದ್ದಿಜೀವಿಗಳು.

    ವಿಚಾರವಂತರು ಕೂಡ ಹಲವು ವರ್ಷಗಳಿಂದ ಆಡುತ್ತಿದ್ದರೂ ಪ್ರತಿವರ್ಷವೂ ಜ್ಯೋತಿಯ ದರ್ಶನಕ್ಕಾಗಿ ಹಂಬಲಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

    ಐದು ಕೋಟಿಗೂ ಹೆಚ್ಚು ಭಕ್ತರು ಪ್ರತಿವರ್ಷ ಶಬರಿಮಲೆಗೆ ಭೇಟಿ ಕೊಡುತ್ತಾರೆ ಎನ್ನುವ ಅಂದಾಜಿದೆ.

    ಅಯ್ಯಪ್ಪನ ಆದಾಯವೂ ಹೆಚ್ಚುತ್ತಲೇ ಇದೆ. ಇದೆಲ್ಲವೂ ಸೂಚಿಸುವುದು ಏನನ್ನು?

    ಈ ಬೆಳಕಿನ ಮರ್ಮವನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮ ಗ್ರಾಮೀಣ ಪ್ರದೇಶಗಳಿಗೆ ಹೋಗಬೇಕು.

    ಜ್ಯೋತಿಯ ಸತ್ಯಾಸತ್ಯತೆಯ ವಿಷಯವೇನೇ ಇರಲಿ, ಶಬರಿಮಲೆಯಲ್ಲಿನ ಭಕ್ತರ ಉತ್ಸಾಹ ಹಾಗೂ ಅವರ ಆಚರಣೆಯನ್ನು ನೋಡಿದರೆ ಎಲ್ಲಿ ಮಾನವೀಯತೆಯ ಬೆಳಕೊಂದು ಸಹೃದಯರಿಗೆ ಕಾಣಿಸುತ್ತದೆ.

    ನಾಲ್ಕೈದು ವರ್ಷದ ಮಕ್ಕಳಿಂದ 70–80 ದಾಟಿದ ವೃದ್ಧರಲ್ಲೂ ಅದೇ ಹುರುಪು.

    ಕೈಯಿಲ್ಲದವರು, ಕಾಲಿಲ್ಲದಿದ್ದರೂ ತೆವಳಿಕೊಂಡು ಬೆಟ್ಟ ಹತ್ತುವವರು, ಕಣ್ಣು ಬತ್ತಿ ಹೋದರೂ ಭಕ್ತಿ ಬತ್ತದವರು, ಕೋಟಿಗಟ್ಟಲೆ ಆಸ್ತಿಯ ಒಡೆಯರಾದವರು,

    ನಿರ್ಗತಿಕರು, ಹಿಂದೂ– ಮುಸ್ಲಿಂ– ಕ್ರಿಶ್ಚಿಯನ್ನರು, ರೋಗರುಜಿನಗಳನ್ನು ಹೊತ್ತವರು, ಮಕ್ಕಳಾಗದವರು, ಸಮಾಜದ ಸೇವೆಗೆ ಅರ್ಪಿಸಿಕೊಂಡವರು,

    ಅದೇ ಸಮಾಜದ ನಿಯಮಗಳಿಗೆ ವಿರುದ್ಧವಾಗಿ ನಡೆವವರು… ಯಾರಿಲ್ಲ ಅಲ್ಲಿ? ಒಮ್ಮೆ ಹೋದವರನ್ನು ಮತ್ತೆ ಮತ್ತೆ ಕರೆಯಿಸುವ ಮಾಯೆ. ಇದೇ ಅಲ್ಲವೇ ನಿಜವಾದ ಬೆಳಕು?

    ವಿದೇಶಗಳಿಂದಲೂ ಭಕ್ತರು :

    ರಷ್ಯಾದ ಸೈಂಟ್‌ ಪೀಟರ್ಸ್‌ಬರ್ಗ್‌ನ ಆಯುರ್ವೇದಿಕ್‌ ವೈದ್ಯ ಮತ್ತು ಶಿಕ್ಷಕ ಇಲಿಯ ಪಡಕೋವ ಕಳೆದ ವರ್ಷದ ನವೆಂಬರ್‌ ತಿಂಗಳಿನಲ್ಲಿ ತಮ್ಮೊಂದಿಗೆ ತಮ್ಮ ದೇಶದ ಸುಮಾರು 14 ಮಂದಿಯನ್ನು ಶಬರಿಮಲೆಗೆ ಕರೆತಂದಿದ್ದರು.

    ಎಲ್ಲರೂ 41 ದಿನಗಳ ವ್ರತಾಚರಣೆಯ ನಿಯಮ ಪಾಲಿಸಿದ್ದರು. ಬರಿಗಾಲಿನಲ್ಲಿಯೇ ಕಾಡುಮೇಡಿನ ಹಾದಿಯಲ್ಲಿ ಶಬರಿಮಲೆ ಏರಿದ್ದರು.

    ಶಬರಿಮಲೆಗೆ ದಾರಿ :
    ಕೇರಳದ ಕೊಟ್ಟಾಯಂ ಹಾಗೂ ಚೆಂಗನೂರ್‌ಗಳಿಂದ ಪಂಪಾದವರೆಗೆ ರೈಲು ಸಾರಿಗೆ ವ್ಯವಸ್ಥೆಯಿದೆ.

    ವಾಹನದಲ್ಲಿ ಪಂಪಾದವರೆಗೆ ಬರಲು ಹಲವು ಮಾರ್ಗಗಳಿವೆ.

    ಸಾಮಾನ್ಯವಾಗಿ ವ್ರತಾಚರಣೆ ಮಾಡುವವರು ಎರುಮೇಲಿ ಮೂಲಕವೇ ನಡೆದು ಸಾಗಬೇಕು ಎನ್ನುವುದು ನಿಯಮ.

    ಎರುಮೇಲಿಯಿಂದ ಪಂಪಾಗೆ ಸುಮಾರು 45 ಕಿ.ಮೀ. ದೂರ.

    ಯಾವ ಮಾರ್ಗದ ಮೂಲಕ ಬಂದರೂ ಪಂಪಾವನ್ನು ತಲುಪಿ ಅಲ್ಲಿಂದಲೇ ಸಾಗಬೇಕು.

    ಪಂಪಾದಿಂದ ಶಬರಿಮಲೆ ಸನ್ನಿಧಾನಕ್ಕೆ ಸುಮಾರು ಎಂಟು ಕಿ.ಮೀ.

    ಮತ್ತೆ ಮತ್ತೆ ಹೋಗುವಾಸೆ…
    ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ನಿಂದ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ತನಕ ಬಹುತೇಕ ಎಲ್ಲಾ ಸಿನಿಮಾ ಸ್ಟಾರ್ ಗಳು ಶಬರಿಮಲೆ ಗೆ ತೆರಳಿ ಅಯ್ಯಪ್ಪ ಸ್ವಾಮೀ ಅವರ ದರ್ಶನ ಪಡೆದಿದ್ದಾರೆ.

    ಅಯ್ಯಪ್ಪ ಸ್ವಾಮೀಯ ದರ್ಶನ ಪಡೆಯುತ್ತಿರುವ ದರ್ಶನ್

    ಮೊದಲ ಸಲ ಶಬರಿಮಲೆಗೆ ಹೋದಾಗ ಬಹುಶಃ ನಾನು ಐದು ವರ್ಷದ ಹುಡುಗ.

    ನಂಬಿಯಾರ್‌ ಸ್ವಾಮಿಗಳ ಗುಂಪಿನಲ್ಲಿ ಅಪ್ಪಾಜಿ (ರಾಜ್‌ಕುಮಾರ್‌) ಜೊತೆಗೆ ವಿಷ್ಣುವರ್ಧನ್‌,  ರಜನೀಕಾಂತ್‌, ಶಿವರಾಂ, ತಮಿಳು ನಟ ಮುತ್ತುರಾಮನ್‌ ಮುಂತಾದವರು ಇದ್ದರು.

    1981ರಲ್ಲಿ ಮದರಾಸಿನಿಂದ ಬೆಂಗಳೂರಿಗೆ ನಮ್ಮ ಕುಟುಂಬ ಸ್ಥಳಾಂತರವಾದ ಬಳಿಕ ಬೆಂಗಳೂರಿನಿಂದಲೇ ತಂಡವಾಗಿ ಅಪ್ಪಾಜಿ ಮತ್ತಿತರರು ಹೊರಡುತ್ತಿದ್ದರು.

    ಚಿಕ್ಕವನಿದ್ದಾಗ ಕಠಿಣ ವ್ರತ ಪಾಲಿಸಿ ಯಾತ್ರೆ ಕೈಗೊಳ್ಳುತ್ತಿದ್ದೆ.

    ಈಗ ಸಮಯದ ಅಭಾವ. 10–12 ದಿನ ಮಾತ್ರ ಮಾಲೆ ಹಾಕಲು ಸಮಯ ಸಿಗುತ್ತಿದೆ.

    ಮಕರಸಂಕ್ರಾಂತಿಯಂದೇ ಅಯ್ಯಪ್ಪನ ದರ್ಶನಕ್ಕೆ ತೆರಳಲು ಕೂಡ ಸಾಧ್ಯವಾಗುತ್ತಿಲ್ಲ.

    ಹಿರಿಯ ನಟರ ಜೊತೆ ಶಬರಿಮಲೆಗೆ ಹೋಗುತ್ತಿದ್ದುದೊಂದು ಅದ್ಭುತ ಅನುಭವ. ನಾವು ಸಿನಿಮಾದಲ್ಲಿ ಮಾತ್ರ ಸ್ಟಾರ್‌ಗಳು.

    ಹೊರಗಲ್ಲ. ಮಾಲೆ ಹಾಕಿದಾಗಲಂತೂ ಸಾಮಾನ್ಯರಲ್ಲಿ ಸಾಮಾನ್ಯರು.

    ಅಲ್ಲಿಗೆ ಹೋಗಿ ಬಂದಾಗ ಇಷ್ಟೊಂದು ಜನರ ಮಧ್ಯೆ ಇದ್ದೆವಲ್ಲ ಎಂಬ ಕಲ್ಪನೆಯೇ ವಿಶಿಷ್ಟ ಅನುಭವ ನೀಡುತ್ತದೆ.

    ಭಕ್ತಿ ಮನದೊಳಗೆ ತುಡಿಯುತ್ತಿರುತ್ತದೆ. ಮರಳಿದ ಮೇಲೆ ಅದನ್ನು ಜನರೊಂದಿಗೆ ಹಂಚಿಕೊಳ್ಳುತ್ತೇವೆ.

    ಅವರಲ್ಲೂ ಪ್ರೇರಣೆ ಮೂಡಿಸುತ್ತೇವೆ. ಭಕ್ತಿಯ ಕೆಲಸವೇ ಇದು ಎಂದು ತಮ್ಮ ಅನುಭವವನ್ನು ಬಿಚ್ಚಿಡುತ್ತಿದ್ದಾರೆ ಕನ್ನಡದ ಪವರ್ ಸ್ಟಾರ್ ಪುನೀತ್‌ ರಾಜಕುಮಾರ್‌.

    ಒಮ್ಮೆ ಹೋದವರನ್ನು ಮತ್ತೆ ಮತ್ತೆ ಕರೆಯಿಸುವ ಮಾಯೆಯೇ ಶಬರಿ ಮಲೆ…

    Share Information
    Advertisement
    Click to comment

    You must be logged in to post a comment Login

    Leave a Reply