LATEST NEWS
ಬಾಗಿಲು ತೆರೆದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ…!!
ಕೇರಳ ಜುಲೈ 17: ಕೊರೊನಾ 2ನೇ ಅಲೆಯ ನಡುವೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಭಕ್ತರಿಗೆ ಇಂದಿನಿಂದ ತರೆದಿದ್ದು, 5 ದಿನಗಳ ಕಾಲ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಸಿಗಲಿದೆ. ಆನ್‌ಲೈನ್ ಸರದಿಯನ್ನು ಅನುಸರಿಸಿ ದರ್ಶನಕ್ಕೆ ಕೇವಲ 5,000 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಕೊರೊನಾದ ಎರಡನೇ ಅಲೆ ಭೀಕರತೆ ಹಿನ್ನಲೆ ಶಬರಿಮಲೆಗೆ ಭಕ್ತರಿಗೆ ಅವಕಾಶವನ್ನುನ ನಿರ್ಬಂಧಿಸಲಾಗಿತ್ತು, ಅಲ್ಲದೆ ಲಾಕ್‌ಡೌನ್ ಅವಧಿಯಲ್ಲಿ ತನ್ನ ಅಧೀನದಲ್ಲಿರುವ 1,200 ದೇವಾಲಯಗಳಿಗೆ ಭಕ್ತರು ಪ್ರವೇಶಿಸದಂತೆ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ನಿರ್ಬಂಧ ವಿಧಿಸಿತ್ತು. ಆದಾಗ್ಯೂ ಧಾರ್ಮಿಕ ವಿಧಿವಿಧಾನಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಂಡಿತ್ತು.
ಈಗ ಕೊರೊನಾ ಪ್ರಕರಣ ಇಳಿಕೆ ಹಿನ್ನಲೆ ಕೊವಿಡ್ ಮಾರ್ಗಸೂಚಿಯ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಶಬರಿ ಮಲೆಗೆ ಭಕ್ತರಿಗೆ ಅವಕಾಶವನ್ನು ಕೇರಳ ಸರಕಾರ ಕಲ್ಪಿಸಿದೆ. ದೇಗುಲ ಆವರಣದಲ್ಲಿ ಕಡ್ಡಾಯ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸೂಕ್ತ ಕೋವಿಡ್ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್ನು ಶಬರಿಮಲೆಗೆ ತೆರಳುವ ಭಕ್ತರು ಆನ್‌ಲೈನ್ ಸರದಿಯನ್ನು ಅನುಸರಿಸಿ ದರ್ಶನಕ್ಕೆ ಕೇವಲ 5,000 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ. ಎಲ್ಲ ಭಕ್ತಾದಿಗಳು ಕಡ್ಡಾಯವಾಗಿ 48 ಗಂಟೆಗಳ ಹಿಂದೆ ನೀಡಿದ ನೆಗೆಟಿವ್ ಆರ್‌ಟಿ-ಪಿಸಿಆರ್ ಕೋವಿಡ್-19 ಪರೀಕ್ಷಾ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಮಾಸಿಕ ಧಾರ್ಮಿಕ ಆಚರಣೆಗಳ ಬಳಿಕ ಈ ತಿಂಗಳ 21ರಂದು ದೇವಾಲಯ ಮತ್ತೆ ಮುಚ್ಚಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.