LATEST NEWS
ಕಾನೂನು ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ನಾಪತ್ತೆಯಾಗಿದ್ದ ವಕೀಲ ನ್ಯಾಯಾಲಯಕ್ಕೆ ಶರಣು
ಮಂಗಳೂರು ಡಿಸೆಂಬರ್ 20: ತನ್ನ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾನೂನು ವಿಧ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ತಲೆ ಮರೆಸಿಕೊಂಡಿದ್ದ ಆರೋಪಿ ವಕೀಲ ಕೆ.ಎಸ್ಎನ್ ರಾಜೇಶ್ ಇಂದು ಮಂಗಳೂರಿನ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ವಕೀಲ ರಾಜೇಶ್ ಅವರು ತಮ್ಮ ಕಚೇರಿಯಲ್ಲಿ ಇಂಟರ್ನ್ಶಿಪ್ಗೆ ಬಂದಿದ್ದ ಕಾನೂನು ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಜೊತೆಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ವಿದ್ಯಾರ್ಥಿನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ವಕೀಲ ರಾಜೇಶ್ ನಾಪತ್ತೆಯಾಗಿದ್ದರು. ವಕೀಲ ರಾಜೇಶ್ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿ, ಲುಕ್ಔಟ್ ನೋಟೀಸ್ ಜಾರಿಗೊಳಿಸಲಾಗಿತ್ತು. ಆರೋಪಿ ವಕೀಲರಿಗೆ ಸಹಕಾರ ನೀಡಿದ ಕಾರಣಕ್ಕೆ ವಕೀಲನ ಪತ್ನಿ ಸೇರಿದಂತೆ ಹಲವರನ್ನು ಬಂಧಿಸಲ್ಪಟ್ಟಿದ್ದರೂ ಆರೋಪಿ ಪತ್ತೆಯಾಗಿರಲಿಲ್ಲ. ಇದೀಗ ಆರೋಪಿ ಘಟನೆ ನಡೆದ ತಿಂಗಳುಗಳ ಬಳಿಕ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.
ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಕೆಎಸ್ಎನ್ ರಾಜೇಶ್ ಭಟ್ ಅವರಿಗೆ ಸುಪ್ರೀಂಕೋರ್ಟ್ ನಲ್ಲೂ ನಿರೀಕ್ಷಣಾ ಜಾಮೀನು ತಿರಸ್ಕಾರಗೊಂಡ ಹಿನ್ನಲೆ ಇಂದು ಮಂಗಳೂರಿನ ಮೂರನೇ ಜೆ.ಎಂ.ಎಫ್.ಸಿ ಕೋರ್ಟ್ ಎಂದು ಶರಣಾಗಿದ್ದಾರೆ. ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇನ್ನು ನಾಳೆ ಪ್ರಧಾನ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಲಿದೆ.