LATEST NEWS
ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯಾ ಸರಣಿ ಎಚ್ಚೆತ್ತುಕೊಳ್ಳದ ಸರ್ಕಾರ – ಕ್ಯಾಂಪಸ್ ಫ್ರಂಟ್

ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯಾ ಸರಣಿ ಎಚ್ಚೆತ್ತುಕೊಳ್ಳದ ಸರ್ಕಾರ – ಕ್ಯಾಂಪಸ್ ಫ್ರಂಟ್
ಮಂಗಳೂರು ಸೆಪ್ಟೆಂಬರ್ 29: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ವಿವಿಧ ಸಮಸ್ಯೆಗಳಿಗೆ ಸಿಲುಕಿ ವಿದ್ಯಾರ್ಥಿಗಳ ಆತ್ಮಾಹತ್ಯಾ ಸರಣಿಯು ನಡೆಯುತ್ತಿದ್ದು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ರೀತಿಯ ಕ್ರಮಗಳನ್ನು ಕಾಣದಿರುವುದು ಶಿಕ್ಷಣ ಕ್ಷೇತ್ರದ ಕುರಿತಾದ ಬೇಜವಾಬ್ದಾರಿಯನ್ನು ಎತ್ತಿತೋರಿಸುತ್ತದೆ ಎಂದು ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷರಾದ ಇಮ್ರಾನ್ ಪಿ.ಜೆ ಆತಂಕ ವ್ಯಕ್ತಪಡಿಸಿದ್ದಾರೆ.
ಕೇವಲ ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ನಾಲ್ಕು ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣಗಳು ನಡೆದಿದ್ದು ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಬೆಂಗಳೂರು ಮೂಲದ ವಿನೂತ, ಸುಳ್ಯ ಕೆ.ವಿ.ಜಿ ಡೆಂಟಲ್ ಕಾಲೇಜಿನ ಕೇರಳ ಮೂಲದ ವಿದ್ಯಾರ್ಥಿನಿ ನೇಹಾ ಥಾಮಸ್ ಹಾಗೂ ಎಕ್ಸ್ಪರ್ಟ್ ಸಂಸ್ಥೆಯ ವಿದ್ಯಾರ್ಥಿ ನೆವಿಲ್ಲಾ ಫೆರ್ನಾಂಡಿಸ್ ಮತ್ತು ಪುತ್ತೂರಿನ ಬೆಟ್ಟಂಪಾಡಿ ಕಾಲೇಜಿನ ಕೊಡಗು ಮೂಲದ ವಿದ್ಯಾರ್ಥಿನಿ ಜೀವಿತ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳು.

ಈ ಎಲ್ಲಾ ಪ್ರಕರಣಗಳು ನಡೆಯುತ್ತಿದ್ದರೂ ರಾಜ್ಯ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಯು ಮೌನ ವಹಿಸಿರುವುದು ಖಂಡನೀಯ. ದೇಶದ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ 40 ರಷ್ಟು ವಿದ್ಯಾರ್ಥಿಗಳು ಎಂದು ವರದಿ ಹೇಳುತ್ತಿದೆ. ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳ ಮಾನಸಿಕ ಖಿನ್ನತೆ, ಕಲಿಕಾ ಒತ್ತಡಗಳನ್ನು ಪರಿಹರಿಸಲು ಶಾಲಾ ಕಾಲೇಜು ಮಟ್ಟದಲ್ಲಿ ಸಮಾಲೋಚನಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಹಾಗೂ ಸಂಬಂದಪಟ್ಟ ಇಲಾಖೆಗಳು ಚರ್ಚಿಸಿ ಶೀಘ್ರ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಎಲ್ಲಾ ಪ್ರಕರಣಗಳ ತನಿಖೆಗೆ ಸರ್ಕಾರ ವಿಶೇಷ ತಂಡವನ್ನು ನೇಮಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.