UDUPI
ಕೊರೊನಾ ಆರ್ಥಿಕ ಸಂಕಷ್ಟಕ್ಕೆ ಉಡುಪಿಯಲ್ಲಿ ಮೂರನೇ ಬಲಿ
ಉಡುಪಿಯ ಕನ್ನರಪಾಡಿ ನಿವಾಸಿ ಆತ್ಮಹತ್ಯೆಗೆ ಶರಣು
ಉಡುಪಿ ಜೂನ್ 11: ಕೊರೊನಾ ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಜನರ ಆರ್ಥಿಕ ಮಟ್ಟ ಸಂಪೂರ್ಣ ಕುಸಿದು ಹೋಗಿದ್ದು, ಇದೇ ಕಾರಣಕ್ಕೆ ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಇದೀಗ ಸಣ್ಣ ಸಣ್ಣ ವ್ಯಾಪಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಆತಂಕಕಾರಿ ವಿದ್ಯಮಾನಗಳು ಬೆಳಕಿಗೆ ಬರುತ್ತಿವೆ.
ಉಡುಪಿಯಲ್ಲಿ ಕೊರೋನಾ ಆರ್ಥಿಕ ಸಂಕಷ್ಟಕ್ಕೆ ಇಂದು ಮೂರನೇ ಬಲಿಯಾಗಿದೆ. ಇಲ್ಲಿನ ಕನ್ನರಪಾಡಿ ನಿವಾಸಿ ರಘುನಾಥ್ ಸೇರಿಗಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಟೈಲರ್ ವೃತ್ತಿ ಮಾಡುತ್ತಿದ್ದ ರಘುನಾಥ್, ಕಳೆದ ಎರಡು ಮೂರು ತಿಂಗಳಿನಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದರು. ಆರ್ಥಿಕವಾಗಿ ಸಾಕಷ್ಟು ಜರ್ಜರಿತರಾಗಿದ್ದ ರಘುನಾಥ್ ಶೇರಿಗಾರ್ ಮೊನ್ನೆ ಮನೆಯಿಂದ ಏಕಾಏಕಿ ಕಾಣೆಯಾಗಿದ್ದರು.
ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ರಘುನಾಥ್ ಪತ್ತೆಯಾಗಿದ್ದಾರೆ. ಇವರು ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಆಗಲಿದ್ದಾರೆ. ಕೆಲಸವಿಲ್ಲದೆ ಖಿನ್ನತೆಗೆ ಜಾರಿದ್ದ ರಘುನಾಥ್ ನಿನ್ನೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.