LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳವಳ ಉಂಟು ಮಾಡುತ್ತಿರುವ ನದಿಗೆ ಹಾರಿ ಆತ್ಮಹತ್ಯೆ ಸರಣಿ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳವಳ ಉಂಟು ಮಾಡುತ್ತಿರುವ ನದಿಗೆ ಹಾರಿ ಆತ್ಮಹತ್ಯೆ ಸರಣಿ
ಮಂಗಳೂರು ಆಗಸ್ಟ್ 08: ದಕ್ಷಿಣಕನ್ನಡ ಜಿಲ್ಲೆಯ ಮಳೆಯಿಂದ ತುಂಬಿ ತುಳುಕುತ್ತಿರುವ ನದಿಗಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇಂದು ಕಾಲೇಜು ವಿದ್ಯಾರ್ಥಿಯೋರ್ವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರ ಹೊರವಲಯದ ಉಳ್ಳಾಲ ನೇತ್ರಾವತಿ ಸೇತುವೆಯ ಮೇಲೆ ಈ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಸೇತುವೆ ಮೇಲೆ ಇಂದು ಮಧ್ಯಾಹ್ನ ಯುವಕನೋರ್ವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತೊಕ್ಕೊಟ್ಟು ಕಡೆಯಿಂದ ಸೇತುವೆ ಮೇಲೆ ನಡೆದುಕೊಂಡು ಬರುತ್ತಿದ್ದ ಯುವಕ ಏಕಾಏಕಿ ನೋಡುನೋಡು ತಿದ್ದಂತೆ ನದಿಗೆ ಹಾರಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಟೀ ಶರ್ಟ್ , ಜೀನ್ಸ್ ಧರಿಸಿ ಹೆಗಲಿಗೆ ಬ್ಯಾಗ್ ನೇತುಹಾಕಿದ್ದು ಮೇಲ್ನೋಟಕ್ಕೆ ಕಾಲೇಜು ವಿದ್ಯಾರ್ಥಿಯಂತೆ ಕಾಣುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನದಿಗೆ ಹಾರಿ ಆತ್ಮಹತ್ಯೆ ಗೈದ ಯುವಕ ಯಾರೆಂದು ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಕಂಕನಾಡಿ ನಗರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನದಿಗೆ ಹಾರಿದ ಯುವಕನ ಪತ್ತೆಗಾಗಿ ಶೋಧಕಾರ್ಯ ಆರಂಭಿಸಲಾಗಿದೆ.