Connect with us

DAKSHINA KANNADA

ಕಮ್ಯುನಿಸ್ಟ್ ಚಳುವಳಿಯ ಹಿರಿಯ ಚೇತನ ಕಾಂ.ಜೆ್ರಿ ಪತ್ರಾವೋ ಇನ್ನಿಲ್ಲ…!

ಮಂಗಳೂರು : ಕಮ್ಯುನಿಸ್ಟ್ ಪಕ್ಷ ಹಾಗೂ ಅದರ ಸಾಮೂಹಿಕ ಸಂಘಟನೆಗಳ ಸಂಗಾತಿಗಳು ಎದುರಿಗೆ ಸಿಕ್ಕಾಗ ಕಾಮ್ರೇಡ್ ಕೆಂಪು ವಂದನೆ ಎಂದು ಮುಷ್ಠಿ ಹಿಡಿದ ಕೈಯನ್ನೆತ್ತಿ ಅಭಿನಂದನೆ ಸಲ್ಲಿಸುವ ಓರ್ವ ಅಪರೂಪದ ವ್ಯಕ್ತಿ ಕಾಂ.ಜೆರ್ರಿ ಪತ್ರಾವೋರವರು(74)  ಶುಕ್ರವಾರ  ಬೆಳಿಗ್ಗೆ ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ತೀವ್ರ ಹ್ರದಯಾಘಾತದಿಂದ ನಿಧನರಾಗಿದ್ದಾರೆ.

CPIM ಸದಸ್ಯರಾಗಿದ್ದ ಕಾಂ.ಜೆರ್ರಿಯವರು ಬೆಳ್ತಂಗಡಿ, ಮಡಿಕೇರಿ ಮತ್ತು ಕಳೆದ 3 ವರ್ಷಗಳಿಂದ ಮಂಗಳೂರಿನಲ್ಲಿ ಪಕ್ಷದ ಹಾಗೂ ಸಾಮೂಹಿಕ ಸಂಘಟನೆಗಳ ಚಳುವಳಿಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಮೂಲತಃ ಬೆಳ್ತಂಗಡಿಯವರಾಗಿದ್ದ ಇವರು,ಎಳೆಯ ಪ್ರಾಯದಲ್ಲೇ ಎಡಪಂಥೀಯ ಚಳುವಳಿಗೆ ಆಕರ್ಷಿತರಾಗಿ ಕಾಂ.ಕೆ.ವಿ.ರಾವ್ ಉಜಿರೆ(ಯಳಚಿತ್ತಾಯರು) ಯವರ ಗರಡಿಯಲ್ಲಿ ಪಳಗಿದ್ದು,ಕಾರ್ಮಿಕ ವರ್ಗದ ತತ್ವ ಸಿದ್ದಾಂತಗಳ ಬಗ್ಗೆ ಅಚಲ ನಂಬಿಕೆಯನ್ನಿಟ್ಟು ಸಮರ್ಪಣಾಭಾವದಿಂದ ಕೆಲಸ ನಿರ್ವಹಿಸಿದ್ದರು. ಮೆಸ್ಕಾಂನಲ್ಲಿ ಕಿರಿಯ ಇಂಜಿನಿಯರ್ ಆಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಆ ಸಂದರ್ಭದಲ್ಲೂ ದುಡಿಯುವ ವರ್ಗದ ಹಾಗೂ ಶೋಷಿತರ ಪರವಾಗಿ ತೆರೆಯ ಮರೆಯಲ್ಲಿ ಅವಿಶ್ರಾಂತವಾಗಿ ದುಡಿದಿರುತ್ತಾರೆ.ನಿವ್ರತ್ತಿಯಾದ ಬಳಿಕ ಮೆಸ್ಕಾಂನಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರ ಪರವಾಗಿ ಬಹಿರಂಗವಾಗಿ ಧ್ವನಿ ಎತ್ತುವ ಮೂಲಕ ಅವರ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.ಜನಶಕ್ತಿ ಹಾಗೂ ಪೀಪಲ್ಸ್ ಡೆಮೊಕ್ರಸಿಯ ಓದುಗರಾಗಿದ್ದ ಜೆರ್ರಿಯವರು ಎಡಪಂಥೀಯ ವಿಚಾರಧಾರೆಯ ಪುಸ್ತಕಗಳನ್ನು ಖರೀದಿಸಿ ತಾನು ಸಂಪೂರ್ಣವಾಗಿ ಓದುವುದಲ್ಲದೆ ಇತರರಿಗೂ ಓದುವಂತೆ ಪ್ರಚೋದಿಸುತ್ತಿದ್ದರು.

ವಯೋಸಹಜ ಕಾಯಿಲೆಯಿಂದ ಆರೋಗ್ಯದ ಪರಿಸ್ಥಿತಿಯಲ್ಲಿ ಏರುಪೇರಾಗಿದ್ದರೂ ಇತ್ತೀಚಿಗೆ ಮಂಗಳೂರಿನಲ್ಲಿ ಜರುಗಿದ DYFI ಸಮ್ಮೇಳನಕ್ಕೆ ಮಡಿಕೇರಿ ಭಾಗಮಂಡಲದಲ್ಲಿರುವ ತಮ್ಮ‌ಮನೆಯಿಂದ ಬಂದು 3 ದಿನವೂ DYFI ನ ಯುವ ಕಾರ್ಯಕರ್ತರೊಂದಿಗೆ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಕಮ್ಯುನಿಸ್ಟ್ ಪಕ್ಷವನ್ನು ತನ್ನ ಪ್ರಾಣಕ್ಕಿಂತಲೂ ಜಾಸ್ತಿ ಪ್ರೀತಿಸುವ ಕಾಂ.ಜೆರ್ರಿಯವರು ಪಕ್ಷದ ಹಾಗೂ ಸಾಮೂಹಿಕ ಸಂಘಟನೆಗಳ ಯಾವುದೇ ಕಾರ್ಯಕ್ರಮದಲ್ಲೂ ಗೈರುಹಾಜರಿಯಾಗದೆ,ಅಲ್ಲಿ ಭಾಗವಹಿಸುವ ಮೂಲಕ ಇತರ ಸಂಗಾತಿಗಳಿಗೆ ಸ್ಪೂರ್ತಿಯಾಗುತ್ತಿದ್ದರು. ಇಳಿವಯಸ್ಸಿನಲ್ಲೂ ಚಿರಯುವಕನಂತೆ ನಗುನಗುತ್ತಾ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ಸಂಗಾತಿ ಜೆರ್ರಿ ಅತ್ಯಂತ ಪರೋಪಕಾರಿ ಹಾಗೂ ಕೊಡುಗೈದಾನಿಯಾಗಿದ್ದರು. ಅಂತರ್ ಧರ್ಮಿಯ ಮದುವೆಯಾಗಿರುವ ಕಾಂ.ಜೆರ್ರಿಯವರು ಪತ್ನಿ,ಒಂದು ಗಂಡು,ಎರಡು ಹೆಣ್ಣು ಮಕ್ಕಳು,ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧುಬಳಗವನ್ನು ಅಗಲಿದ್ದಾರೆ.

ಬದುಕಿದ್ದಾಗ ಜನರ ಪರವಾಗಿ ಧ್ವನಿಯಾಗಿದ್ದ ಜೆರ್ರಿಯವರು ಮರಣದ ಬಳಿಕ ತನ್ನ ದೇಹವನ್ನು ಮಂಗಳೂರಿನ ಆಸ್ಪತ್ರೆಗೆ ದಾನ ನೀಡುವುದಾಗಿ ವಾಗ್ದಾನ ನೀಡಿದ್ದರು. ಅದರಂತೆ ಅವರ ದೇಹವನ್ನು ಕಂಕನಾಡಿ ಫಾ.ಮುಲ್ಲರ್ಸ್ ಆಸ್ಪತ್ರೆಗೆ ನಾಳೆ(13-04-2024) ಶನಿವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಆಸ್ಪತ್ರೆಯ ಶವಾಗಾರದ ಬಳಿಯಲ್ಲಿ ಹಸ್ತಾಂತರ ಪ್ರಕ್ರಿಯೆ ಹಾಗೂ ಶ್ರದ್ಧಾಂಜಲಿ ಸಭೆಯೂ ಕೂಡ ನಡೆಯಲಿದೆ.

ಕಾಂ.ಜೆರ್ರಿ ಪತ್ರಾವೋರವರ ಮ್ರತದೇಹದ ಮೇಲೆ ಕೆಂಪು ಬಾವುಟವನ್ನು ಹೊದಿಸುವ ಮೂಲಕ ಕಮ್ಯುನಿಸ್ಟ್ ಚಳುವಳಿಯ ಪರವಾಗಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ.ಕ್ರಷ್ಣಪ್ಪ ಕೊಂಚಾಡಿ, ಸುನಿಲ್ ಕುಮಾರ್ ಬಜಾಲ್, ಜಿಲ್ಲಾ ಸಮಿತಿ ಸದಸ್ಯರಾದ ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಮನೋಜ್ ವಾಮಂಜೂರು, ಬಜಾಲ್ ಪ್ರದೇಶದ CPIM ಯುವನಾಯಕರಾದ ದೀಪಕ್ ಬಜಾಲ್,ಜಗದೀಶ್ ಬಜಾಲ್,ವರಪ್ರಸಾದ್ ಬಜಾಲ್, ಅಶೋಕ್ ಸಾಲ್ಯಾನ್,ಮಹಮ್ಮದ್ ಅನ್ಸಾರ್ ಮುಂತಾದವರು ಉಪಸ್ಥಿತರಿದ್ದರು.

ಎದುರು ಸಿಕ್ಕಾಗ ಅಥವಾ ಪೋನಿನಲ್ಲಿ ಮಾತನಾಡುವಾಗ ಅವರಿಂದ ಬರುತ್ತಿದ್ದ ಪ್ರಥಮ ಶಬ್ದವೇ ಕಾಮ್ರೇಡ್ ಕೆಂಪು ವಂದನೆ…….ಇನ್ನು ಅದು ನೆನಪು ಮಾತ್ರ……!!

Share Information
Continue Reading
Advertisement
Click to comment

Leave a Reply

Your email address will not be published. Required fields are marked *