DAKSHINA KANNADA
ಮನಪಾ ಚುನಾವಣೆಯಲ್ಲಿ ಕಾಂಗ್ರೇಸ್ ಗೆ ಸೋಲು, ನಿಜವಾದ ಹಿರಿಯ ಕಾಂಗ್ರೇಸ್ ಮುಖಂಡ ಜನಾರ್ಧನ ಪೂಜಾರಿ ಭವಿಷ್ಯ
ಮನಪಾ ಚುನಾವಣೆಯಲ್ಲಿ ಕಾಂಗ್ರೇಸ್ ಗೆ ಸೋಲು, ನಿಜವಾದ ಹಿರಿಯ ಕಾಂಗ್ರೇಸ್ ಮುಖಂಡ ಜನಾರ್ಧನ ಪೂಜಾರಿ ಭವಿಷ್ಯ
ಮಂಗಳೂರು, ನವಂಬರ್ 14: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದ್ದಾರೆ.
60 ವಾರ್ಡ್ ಗಳ ಸದಸ್ಯ ಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 44 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪಾಲಿಕೆಯ ಅಧಿಕಾರದ ಗದ್ದುಗೆಯಲ್ಲಿ ಕೂರಲು ರೆಡಿಯಾಗಿದೆ.
ಬಿಜೆಪಿ ಈ ಬಾರಿ ಜಯಗಳಿಸಲಿದೆ ಎನ್ನುವ ಹಿರಿಯ ಕಾಂಗ್ರೇಸ್ ಮುಖಂಡ ಬಿ. ಜನಾರ್ಧನ ಪೂಜಾರಿಯವರ ಭವಿಷ್ಯ ಇಲ್ಲಿ ನಿಜವಾಗಿದೆ.
ಕಾಂಗ್ರೇಸ್ ಪಕ್ಷ ಅಭ್ಯರ್ಥಿ ಆಯ್ಕೆಯಲ್ಲಿ ನಡೆಸಿದ ಗೊಂದಲ, ಪಕ್ಷದಲ್ಲಿ ಹೆಚ್ಚಾದ ಭಿನ್ನಮತದ ಲಾಭವನ್ನು ಬಿಜೆಪಿ ಪಕ್ಷ ಪಡೆಯುವ ಮೂಲಕ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಲಿದೆ ಎಂದು ಜನಾರ್ಧನ ಪೂಜಾರಿ ಚುನಾವಣೆಗೆ ಮೊದಲೇ ವಿಶ್ಲೇಷಿಸಿದ್ದರು.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಂಬಂಧಿಸಿದಂತೆ ಜಿಲ್ಲೆಯ ಹಿರಿಯ ಕಾಂಗ್ರೇಸ್ ಮುಖಂಡರಾದ ಜನಾರ್ಧನ ಪೂಜಾರಿಯವರ ಅಭಿಪ್ರಾಯವನ್ನೂ ಜಿಲ್ಲಾ ಕಾಂಗ್ರೇಸ್ ಕೇಳದಿರುವುದೂ ಪೂಜಾರಿ ನಿಷ್ಟರ ಅಸಮಾಧಾನಕ್ಕೂ ಕಾರಣವಾಗಿತ್ತು.
ಈ ಎಲ್ಲಾ ಅಸಮಾಧಾನಗಳ ನಡುವೆ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೇಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಮತ್ತೊಂದು ಹೊಡೆತ ಬಿದ್ದಿದೆ.
ಅಲ್ಪಸಂಖ್ಯಾತ ಮತಗಳೂ ಈ ಬಾರಿ ಕಾಂಗ್ರೇಸ್ ನಿಂದ ದೂರವಾಗಿರುವುದೂ ಪಕ್ಷದ ಸೋಲಿಗೆ ಕಾರಣವಾಗಿದೆ ಎನ್ನಲಾಗಿದೆ.
ಕಾಂಗ್ರೇಸ್ ಪಕ್ಷ ಈ ಬಾರಿ ಕೇವಲ 14 ಸ್ಥಾನಕ್ಕೆ ಮಾತ್ರ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.