KARNATAKA
ಪುತ್ರ, ಸೊಸೆಯಿಂದ ಮಾನಸಿಕ ಕಿರುಕುಳ ನಟಿ ಶ್ಯಾಮಲಾದೇವಿ ದೂರು
ಬೆಂಗಳೂರು, ಜೂನ್ 22: ನಿರ್ದೇಶಕ ಸಿದ್ದಲಿಂಗಯ್ಯ ಅವರ ಪತ್ನಿ, ನಟಿ ಶ್ಯಾಮಲಾದೇವಿ ಅವರು ಪುತ್ರ ಹಾಗೂ ಸೊಸೆಯ ವಿರುದ್ಧ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ಪುತ್ರ ನಿತಿನ್ ಹಾಗೂ ಸೊಸೆ ಸುಶ್ಮಿತಾ ಅವರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ‘ದೈಹಿಕವಾಗಿ ಹಲ್ಲೆ ನಡೆಸಿರುವ ಕುರಿತು ದೂರಿನಲ್ಲಿ ತಿಳಿಸಿದ್ದಾರೆ. ಆಸ್ತಿ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದಾರೆಂದು ಹೇಳಿದ್ದು, ತನಿಖೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.
‘ಪುತ್ರನ ಮದುವೆ ಆಗುವವರೆಗೆ ಎಲ್ಲವೂ ಚೆನ್ನಾಗಿತ್ತು. ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿಯೊಂದಿಗೆ ಮದುವೆ ಮಾಡಿದ್ದೆ. ಅದಾದ ಮೇಲೆ ಕಿರುಕುಳ ನೀಡಲು ಆರಂಭಿಸಿದ. ಮನೆಯನ್ನು ತಮ್ಮ ಹೆಸರಿಗೆ ಬರೆದು ಕೊಡುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ.
‘ಪತ್ನಿಗೆ ಹೇಳಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸುತ್ತೇನೆ ಎಂದು ಪುತ್ರ ಬೆದರಿಸುತ್ತಾನೆ. ಆಕೆಯೂ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ’ ಎಂದು ನಟಿ ಅಳಲು ತೋಡಿಕೊಂಡಿದ್ದಾರೆ.‘ಹಿರಿಯ ನಾಗರಿಕರ ವೇದಿಕೆಗೆ ದೂರು ನೀಡಿದ್ದೆ. ಆಗ ಪುತ್ರ ಕ್ಷಮೆ ಕೇಳಿದ್ದ. ಮತ್ತೆ ಅದೇ ರೀತಿ ವರ್ತನೆ ಮುಂದವರಿದಿದೆ. ನನಗೆ ನ್ಯಾಯ ಕಲ್ಪಿಸಿ‘ ಎಂದು ಕೋರಿದ್ದಾರೆ. ಪೊಲೀಸ್ ಆಯುಕ್ತರಿಗೂ ಮನವಿ ಸಲ್ಲಿಸಿದ್ದಾರೆ.