Connect with us

FILM

ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ಇನ್ನಿಲ್ಲ

ಬೆಂಗಳೂರು, ಫೆಬ್ರವರಿ 19 : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ, ಕಲಾತಪಸ್ವಿ ರಾಜೇಶ್(89) ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯ, ತೀವ್ರ ಉಸಿರಾಟ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ್‌ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ಕೆಲ ದಿನಗಳಿಂದ ರಾಜೇಶ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್ ಅಭಿನಯಿಸಿದ್ದಾರೆ. ವಿದ್ಯಾರಣ್ಯಪುರದಲ್ಲಿರುವ ನಿವಾಸದಲ್ಲಿ ಇಂದು ಸಂಜೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ʼಕಲಾತಪಸ್ವಿ ರಾಜೇಶ್’ ಎಂಬುದು ಅವರ ಆತ್ಮಚರಿತ್ರೆಯ ಹೆಸರು. ತಮಿಳು ಚಿತ್ರರಂಗದಿಂದ ಅಂದಿನ ದಿನಗಳಲ್ಲಿ ಅವಕಾಶ ಬಂದಿದ್ದರೂ ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಪ್ರಬಲ ಕನಸು ಹೊಂದಿದ್ದ ರಾಜೇಶ್ ಅಂತಹ ಕರೆಗಳನ್ನು ನಯವಾಗಿ ನಿರಾಕರಿಸಿದ್ದರು.

ಸೊಸೆ ತಂದ ಸೌಭಾಗ್ಯ, ನಮ್ಮ ಊರು, ಗಂಗೆ ಗೌರಿ, ಬೆಳುವಲದ ಮಡಿಲಲ್ಲಿ, ಕಪ್ಪು ಬಿಳುಪು, ಬೃಂದಾವನ, ಬೋರೆ ಗೌಡ ಬೆಂಗಳೂರಿಗೆ ಬಂದ, ಮರೆಯದ ದೀಪಾವಳಿ, ಪ್ರತಿಧ್ವನಿ, ಕಾವೇರಿ, ದೇವರ ಗುಡಿ, ಬದುಕು ಬಂಗಾರವಾಯ್ತು, ಸೊಸೆ ತಂದ ಸೌಭಾಗ್ಯ, ಮುಗಿಯದ ಕಥೆ, ಬಿಡುಗಡೆ, ದೇವರದುಡ್ಡು, ಕಲಿಯುಗ, ಪಿತಾಮಹ ಮುಂತಾದ ಚಿತ್ರಗಳಲ್ಲಿ ರಾಜೇಶ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.

ಶಕ್ತಿ ನಾಟಕ ಮಂಡಳಿಯನ್ನು ಸ್ಥಾಪಿಸಿದ್ದ ರಾಜೇಶ್ ನಾಡಿನೆಲ್ಲೆಡೆ ಸಂಚರಿಸಿದ್ದರು. ಧಾರವಾಡ ವಿಶ್ವವಿದ್ಯಾಲಯ ರಾಜೇಶ್ ಅವರಿಗೆ ಡಾಕ್ಟರೇಟ್ ಗೌರವವನ್ನು ಸಲ್ಲಿಸಿತ್ತು. ಕೆಲ ದಿನಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ ರಾಜೇಶ್ ಅವರಿಗೆ 5 ಜನ ಮಕ್ಕಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *