LATEST NEWS
ನಿಯಂತ್ರಣಕ್ಕೆ ಬಾರದ ಕೊರೊನಾ ಕಾಸರಗೋಡು ಜಿಲ್ಲೆಯಲ್ಲಿ ಇಂದಿನಿಂದ ಅಕ್ಟೋಬರ್ 9 ರವರೆಗೆ ನಿಷೇಧಾಜ್ಞೆ ಜಾರಿ

ಕಾಸರಗೋಡು ಅಕ್ಟೋಬರ್ 3: ಕಾಸರಗೋಡಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ನಿಷೇಧಾಜ್ಞೆ ಜಾರಿಗೊಳಿಸಿ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 2 ರಾತ್ರಿ 12 ಗಂಟೆಯಿಂದ ಅಕ್ಟೋಬರ್ 9ರಂದು ರಾತ್ರಿ 12 ಗಂಟೆವರೆಗೆ 1973ರ ಕ್ರಿಮಿನಲ್ ಕಾಯಿದೆ 144 ಪ್ರಕಾರದ ನಿಷೇಧಾಜ್ಞೆ ಜಾರಿಯಲ್ಲಿರುವುದು. ಹೀಗಾಗಿ ಜಿಲ್ಲೆಯ ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಬೂನು/ ಸಾನಿಟೈಸರ್ ಬಳಸಿ ಕೈಗಳನ್ನು ಶುಚಿಗೊಳಿಸಿ, ಮಾಸ್ಕ್ ಸೂಕ್ತ ರೀತಿ ಬಳಸಿ, ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸಿಕೊಳ್ಳುವ ಮೂಲಕ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಮಂಜೇಶ್ವರ, ಕುಂಬಳೆ, ಬದಿಯಡ್ಕ, ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ, ಚಂದೇರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಪರಪ್ಪ, ಒಡೆಯಂಚಾಲ್, ಪನತ್ತಡಿ ಪೇಟೆಗಳಲ್ಲಿ ಐದಕ್ಕಿಂತ ಅಧಿಕ ಮಂದಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಸಾಬೂನ್, ಸ್ಯಾನಿಟೈಸರ್ ಮೂಲಕ ಕೈಗಳನ್ನು ಶುಚಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿವಾಹ ಸಂಬಂಧ ಸಮಾರಂಭಗಳಲ್ಲಿ ಗರಿಷ್ಠ 50 ಮಂದಿ, ಮರಣ, ಉತ್ತರ ಕ್ರಿಯೆ ಸಹಿತ ಸಮಾರಂಭಗಳಲ್ಲಿ ಗರಿಷ್ಠ 20 ಮಂದಿ ಭಾಗವಹಿಸಬಹುದಾಗಿದೆ. ಅಧಿಕೃತ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಪ್ರಾರ್ಥನೆ, ರಾಜಕೀಯ ಪಕ್ಷಗಳ ಸಭೆಗಳು, ಸಾಂಸ್ಕೃತಿಕ-ಸಾಮಾಜಿಕ ಸಾರ್ವಜನಿಕ ಸಮಾರಂಭಗಳು ಇತ್ಯಾದಿ ಕಡೆ 20 ಮಂದಿ ಭಾಗವಹಿಸಲು ಮಾತ್ರ ಅನುಮತಿ ನೀಡಲಾಗುವುದು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಆದೇಶದ ಜಾರಿಯ ಖಚಿತತೆ ನಡೆಸಬೇಕು. ಜನ ಸೇರುವ ಸಾರ್ವಜನಿಕ ಪ್ರದೇಶಗಳಾದ ಮಾರುಕಟ್ಟೆ, ಬಸ್ ನಿಲ್ದಾಣ, ಬಸ್ ಗಾಗಿ ಕಾದು ನಿಲ್ಲುವ ತಾಣಗಳು ಸಹಿತ ಕೇಂದ್ರಗಳಲ್ಲಿ ದಿನಕ್ಕೆ ಕನಿಷ್ಠ ಒಂದು ಬಾರಿ ರೋಗಾಣುಮುಕ್ತ ಚಟುವಟಿಕೆ ನಡೆಸುವಂತೆ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ಆದೇಶ ನೀಡಲಾಗಿದೆ. ಕೇರಳದ ರಾಜ್ಯದಾದ್ಯಂತ ಅಕ್ಟೋಬರ್ 31 ರ ತನಕ ನಿಷೇಧಾಜ್ಞೆ ಜಾರಿಗೆ ತರಲಾಗಿತ್ತು. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಒಂದು ವಾರಕ್ಕೆ ಸೀಮಿತಗೊಳಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಬಾರದಿದ್ದಲ್ಲಿ ನಿಷೇಧಾಜ್ಞೆಯನ್ನು ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.