LATEST NEWS
ಉಳ್ಳಾಲ ಸೀಗ್ರೌಂಡ್ ನಲ್ಲಿ ನಿರಂತರ ಕಡಲ್ಕೊರೆತ, ಮನೆ ಸಮುದ್ರಪಾಲು

ಮಂಗಳೂರು, ಜು.21: ಉಳ್ಳಾಲ ಮತ್ತು ಸೋಮೇಶ್ವರ, ಉಚ್ಚಿಲ ಪ್ರದೇಶಗಳ ಕಡಲ್ಕೊರೆತದ ಬಗ್ಗೆ ಕಾಳಜಿ ತೋರುವ ಜನಪ್ರತಿನಿಧಿಗಳು ಉಳ್ಳಾಲ ಮತ್ತು ಸೋಮೇಶ್ವರ ನಡುವಿನ ಸೀಗ್ರೌಂಡ್ ಪ್ರದೇಶದ ಕುರಿತು ಅಸಡ್ಡೆ ತೋರಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದಲೂ ಮುಕ್ಕಚ್ಚೇರಿ ಬಳಿಯ ಸೀಗ್ರೌಂಡ್ ತೀರ ಪ್ರದೇಶದಲ್ಲಿ ತೀವ್ರವಾಗಿ ಕಡಲು ಅಬ್ಬರಿಸುತ್ತಿದ್ದು ಈ ಭಾಗದಲ್ಲಿ ಸುಮಾರು 15 ಮನೆಗಳು ಅಪಾಯದ ಅಂಚಿನಲ್ಲಿವೆ. ಕಳೆದ ನಾಲ್ಕು ದಿನಗಳಿಂದ ಇಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಇವತ್ತು ಸತೀಶ್ ಪೂಜಾರಿ ಎಂಬವರ ಮನೆಯ ಆವರಣ ಗೋಡೆ ಸಮುದ್ರಪಾಲಾಗಿದ್ದು ಮನೆಯೂ ಕೊಚ್ಚಿ ಹೋಗುವ ಸ್ಥಿತಿಯಲ್ಲಿದೆ. ಈ ಬಗ್ಗೆ ಸ್ಥಳೀಯರು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಅವರ ಗಮನಕ್ಕೆ ತಂದ ಪರಿಣಾಮ ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಅವರು ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಸೀ ಗ್ರೌಂಡ್ ಸಮುದ್ರ ತೀರದಲ್ಲಿ ಸುಮಾರು 20 ಮನೆಗಳಿವೆ. ಕಡಲ್ಕೊರೆತ ತಡೆಯಲು ಹಾಕಲಾಗುವ ತಾತ್ಕಾಲಿಕ ಕಲ್ಲು ಹಾಕುವ ಕಾಮಗಾರಿಯಲ್ಲೂ ತಾರತಮ್ಯ ನೀತಿ ಅನುಸರಿಸಿದ ಪರಿಣಾಮ ಈ ಪ್ರದೇಶಕ್ಕೆ ಅಪಾಯ ಬಂದಿರುವುದಾಗಿ ಸ್ಥಳೀಯರು ದೂರಿದ್ದಾರೆ.