LATEST NEWS
ಮಲ್ಪೆ ಬೀಚ್ ನಲ್ಲಿ ಸಮುದ್ರಕ್ಕೆ ಇಳಿಯಲು ನಿರ್ಭಂಧ – ಉಲ್ಲಂಘಿಸಿದರೆ ದಂಡ
ಉಡುಪಿ ಅಗಸ್ಟ್ 05: ಇತ್ತೀಚೆಗೆ ಪ್ರವಾಸಿಗರನ್ನು ಸಮುದ್ರಕ್ಕೆ ಆಟವಾಡಲು ಇಳಿದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯಲು ಸೆಪ್ಟೆಂಬರ್ ವರೆಗೆ ನಿರ್ಬಂಧ ಹೇರಲಾಗಿದೆ.
ಕೊಡಗಿನ ಯುವತಿಯೊಬ್ಬಳು ಕೆಲವು ದಿನಗಳ ಹಿಂದೆ ಸಮುದ್ರ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಬೀಚ್‌ನ ಸುಮಾರು 1 ಕಿ.ಮೀ ತೀರದಲ್ಲಿ 5 ರಿಂದ 6 ಅಡಿ ಎತ್ತರದ ನೆಟ್ ಹಾಕಲಾಗಿದ್ದು, ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ. ನಿಯಮ ಉಲ್ಲಂಘಿಸಿ ಸಮುದ್ರಕ್ಕಿಳಿದರೆ ₹ 500 ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ನೀರಿಗಿಳಿದರೆ ಅಪಾಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಪ್ರವಾಸಿಗರಿಗೆ ಕಡಲಿನ ಸೆಳೆತದ ಅರಿವು ಇಲ್ಲವಾದ್ದರಿಂದ, ಎಚ್ಚರಿಕೆ ಕಡೆಗಣಿಸಿ ನೀರಿಗಿಳಿಯುತ್ತಿದ್ದಾರೆ. ಪ್ರವಾಸಿಗರ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬೀಚ್ ನಿರ್ವಹಣಾ ಸಮಿತಿಯ ಹಾಗೂ ಮಂತ್ರ ಟೂರಿಸಂ ಡೆವಲಪ್‌ಮೆಂಟ್ ಸಂಸ್ಥೆಯ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್‌ನಲ್ಲಿ ಪರಿಸ್ಥಿತಿ ನೋಡಿಕೊಂಡು ಬೀಚ್‌ಗೆ ಇಳಿಯಲು ಅನುಮತಿ ನೀಡಲಾಗುವುದು. ಅಲ್ಲಿಯವರೆಗೂ ಪ್ರವಾಸಿಗರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.