Connect with us

    LATEST NEWS

    ಜಿಲ್ಲಾಧಿಕಾರಿಯವರನ್ನು ನಿಂದಿಸಿ ಬೆದರಿಕೆಯೊಡ್ಡಿರುವುದು ಸಂಘ ಸಂಸ್ಕೃತಿಯ ಪ್ರತಿಫಲನ : ಎಸ್.ಡಿ.ಪಿ.ಐ

    ಮಂಗಳೂರು : ಕಾರಿಂಜ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ದ ಪ್ರತಿಭಟನೆ ಸಂದರ್ಭ ಜಿಲ್ಲಾಧಿಕಾರಿ ವಿರುದ್ದ ಅವಹೇಳನ ಮಾಡಿ ಬೆದರಿಕೆಯೊಡ್ಡಿರುವ ಹಿಂದೂ ಜಾಗರಣ ವೇದಿಕೆ ನಾಯಕ ಜಗದೀಶ್ ಕಾರಂತ್ ವರ್ತನೆ ಖಂಡನಾರ್ಹವಾಗಿದೆ ಮತ್ತು ಇದು ಅವರ ಸಂಘ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ.ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಹೇಳಿದ್ದಾರೆ.


    ಸರಕಾರಿ ಅಧಿಕಾರಿಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕೆಂಬುದು ಸಂಘಪರಿವಾರದ ನಾಯಕರ ಧೋರಣೆ. ಆದರೆ ಆ ನಿರೀಕ್ಷೆ ಹುಸಿಯಾದಾಗ ಅವರು ಅಧಿಕಾರಿಗಳ ಕೊರಳಪಟ್ಟಿ ಹಿಡಿಯುವ, ಸಾರ್ವಜನಿಕವಾಗಿ ಅವರನ್ನು ನಿಂದಿಸುವ ಕೃತ್ಯದಲ್ಲಿ ತೊಡಗುತ್ತಾರೆ. ಇದೀಗ ಜಿಲ್ಲಾಧಿಕಾರಿಯವರಿಗೆ ಬಹಿರಂಗ ಬೆದರಿಕೆ ಹಾಕಿರುವುದು ಸಂಘಪರಿವಾರದ ಹೊಡಿ-ಬಡಿ ರಾಜಕಾರಣದ ಅನಾಗರಿಕ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ. ಕೆಲ ಸಮಯದ ಹಿಂದೆ ಪೊಲೀಸ್ ಅಧಿಕಾರಿಯವರನ್ನು ನಿಂದಿಸಿದ ಕಾರಣಕ್ಕಾಗಿ ಇದೇ ಕಾರಂತ್ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ-ಸಂಘಪರಿವಾರದ ನಾಯಕರು ಸರಕಾರಿ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಅವಮಾನಿಸುತ್ತಾ ಬಂದಿದ್ದಾರೆ. ಈ ಹಿಂದೆ ಬಿಜೆಪಿ ಸಂಸದರು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೋರ್ವರ ಮೇಲೆ ದರ್ಪ ಮೆರೆದಿದ್ದರು. ಉತ್ತರ ಕನ್ನಡ ಜಿಲ್ಲೆಯ ಸಂಸದರು ಆಸ್ಪತ್ರೆಯೊಂದರಲ್ಲಿ ವೈದ್ಯರ ಮೇಲೆ ತಮ್ಮ ಪೌರುಷ ಮೆರೆದಿದ್ದರು. ಈ ರೀತಿಯ ಕೃತ್ಯಗಳು ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವೂ ಆಗಿದೆ.


    ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ದ.ಕ.ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿರುವ ವಿಚಾರ ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ. ಜಿಲ್ಲಾಧಿಕಾರಿಯನ್ನು ಅವಮಾನಿಸಿದ ಜಗದೀಶ್ ಕಾರಂತ್ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಅಧಿಕಾರಿ ವರ್ಗದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಯಾವುದೇ ನಿಯಂತ್ರಣವಿಲ್ಲದೇ ನಾಲಗೆ ಹರಿಯಬಿಡುವ ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಸರಕಾರ ನಿರ್ದಾಕ್ಷಿಣ್ಯ ಕ್ರಮಗೊಳ್ಳಬೇಕೆಂದು ಅಬೂಬಕರ್ ಕುಳಾಯಿ ಆಗ್ರಹಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *