DAKSHINA KANNADA
ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ,ರಾಷ್ಟ್ರೀಯ ಅಭಿಯಾನ ;ಇಲ್ಯಾಸ್ ಮುಹಮ್ಮದ್ ತುಂಬೆ

ಮಂಗಳೂರು, ಜು 31 : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಆಶ್ರಯದಲ್ಲಿ ಆಗಸ್ಟ್ 1 ರಿಂದ 25ರ ವರೆಗೆ “ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೊಧಿಸೋಣ” ಎಂಬ ಧ್ಯೇಯವಾಕ್ಯದಡಿ ರಾಷ್ಟ್ರೀಯ ಅಭಿಯಾನ ಹಮ್ಮಿಕೊಂಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ನಿರ್ಮಿಸಿರುವ ಅರಾಜಕತೆಯ ಪರಿಸ್ಥಿತಿಯನ್ನು ಪ್ರತಿರೋಧಿಸಲು ಮತ್ತು ಭಯಭೀತ ಜನರಲ್ಲಿ ಜಾಗೃತಿ ಮೂಡಿಸಿ ಜನರನ್ನು ಸಂಘಟಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ. ಆರ್.ಎಸ್.ಎಸ್ ಮತ್ತು ಬಿಜೆಪಿ ಬೆಂಬಲಿತ ಗೋ ರಕ್ಷಕರು ನಡೆಸಿರುವ ಗುಂಪು ಹಿಂಸಾ ಹತ್ಯೆಯಿಂದಾಗಿ 39 ಮಂದಿ ಅಮಾಯಕ ಜೀವ ಬಲಿಯಾಗಿದ್ದು ನೂರಾರು ಮಂದಿ ಗಾಯಗೊಂಡು ದಯನೀಯ ಸ್ಥಿತಿಗೆ ತಲುಪಿದ್ದಾರೆ. ದೇಶದಾದ್ಯಂತ ಗುಂಪು ಹಿಂಸಾ ಹತ್ಯೆಯು ನಿರಂತರವಾಗಿ ವರದಿಯಾಗುತ್ತಿದ್ದರೂ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ಈ ಹಾವಳಿಯನ್ನು ತಡೆಗಟ್ಟುವ ಬಗ್ಗೆ ಕಿಂಚಿತ್ತು ಗಣನೆಗೆ ತೆಗೆದುಕೊಳ್ಳದಿರುವುದು ಜನತೆಯಲ್ಲಿ ಆಶ್ಚರ್ಯ ಉಂಟುಮಾಡುತ್ತಿದೆ ಎಂದ ಅವರು ದೇಶದಲ್ಲಿ ನೂರಾರು ಮುಸ್ಲಿಂ ಮತ್ತು ದಲಿತ ಕುಟುಂಬಗಳು ಈ ಕೋಮುವಾದಿ ಗೂಂಡಾ ಪಡೆಗಳು ಸೃಷ್ಠಿಸಿದ ಭಯೋತ್ಪಾದನೆಯಿಂದ ನಾಶವಾಗಿದೆ ಎಂದರು. “ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೊಧಿಸೋಣ” ಎಂಬ ರಾಷ್ಟ್ರೀಯ ಅಭಿಯಾನವು ಆಗಸ್ಟ್ 1ರಂದು ರಾಜಸ್ಥಾನದ ಜೈಪುರದಲ್ಲಿ ಉದ್ಘಾಟನೆಗೊಳ್ಳಲಿದ್ದು ಅಭಿಯಾನದ ಕೊನೆಯ ದಿನವಾದ ಆಗಸ್ಟ್ 25ರಂದು ಭಾರತದ ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ಸಂತ್ರಸ್ಥರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹಾಗೂ ಅವರ ನೋವಿನಲ್ಲಿ ನಾವು ಕೂಡ ಭಾಗಿದಾರರು ಎಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ದೇಶದ ವಿವಿಧ ಪ್ರದೇಶಗಳ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ “ಮನೆಯಿಂದ ಹೊರಗೆ ಬನ್ನಿ” ಎಂಬ ಫಲಕವನ್ನು ಪ್ರದರ್ಶಿಸಿ ಕರಾಳತೆಯ ಸಂಕೇತವಾದ ಕಪ್ಪುಪಟ್ಟಿಯನ್ನು ತೋಳುಗಳಿಗೆ ಕಟ್ಟುವ ಮೂಲಕ ದೇಶದ ಗಮನವನ್ನು ಸೆಳೆಯುವುದರೊಂದಿಗೆ ಈ ಅಭಿಯಾನವು ಸಮಾರೋಪಗೊಳ್ಳಲಿರುವುದು. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ದೇಶದ ಪ್ರತಿಯೊಂದು ಮೂಲೆ ಮೂಲೆಗಳಲ್ಲಿ ಸಂಚರಿಸಿ ಗುಂಪು ಹಿಂಸಾ ಹತ್ಯೆಯ ವಿರುದ್ದ ಜನರನ್ನು ಸಂಘಟಿಸುವ ಮತ್ತು ಪ್ರತಿರೋಧಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಇದರ ಅಂಗವಾಗಿ ರಾಷ್ಟ್ರದಾದ್ಯಂತ ಸ್ನೆಹ ಕೂಟ, ವಿಚಾರ ಸಂಕಿರಣ, ರ್ಯಾಲಿ, ಬೃಹತ್ ಸಾರ್ವಜನಿಕ ಸಭೆಗಳು, ಸರ್ವೋಚ್ಚ ನ್ಯಾಯಲಯದ ಮುಖ್ಯ ನ್ಯಾಯಾಧೀಶರಿಗೆ ಆನ್‍ಲೈನ್ ಫಿರ್ಯಾದಿ ಸಲ್ಲಿಕೆ, ಪೋಸ್ಟರ್ ಅಭಿಯಾನ, ಕರಪತ್ರ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ದೇಶದಾದ್ಯಂತ ಸಂಘಟಿಸಲಾಗುವುದು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 34 ಬೃಹತ್ ಸಾರ್ವಜನಿಕ ಸಭೆಗಳು, 250ಕ್ಕೂ ಅಧಿಕ ಕಾರ್ನರ್ ಮೀಟ್‍ಗಳು ಮತ್ತು 10 ವಿಚಾರ ಸಂಕಿರಣಗಳನ್ನು ನಡೆಸಲಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಅಭಿಯಾನದ ಪ್ರಯುಕ್ತ 8 ಸಾರ್ವಜನಿಕ ಸಭೆಗಳು, 100ಕ್ಕೂ ಅಧಿಕ ಕಾರ್ನರ್ ಮೀಟ್‍ಗಳು, 2 ವಿಚಾರ ಸಂಕಿರಣ ಮತ್ತು ಇನ್ನಿತರ ಕಾರ್ಯಕ್ರಮಗಳು ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು. ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿಅಲ್ಫೋನ್ಸೋ ಫ್ರಾಂಕೋ ಜಿಲ್ಲಾಧ್ಯಕ್ಷ ಹನೀಫ್‍ಖಾನ್ ಕೊಡಾಜೆ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಥಾವುಲ್ಲಾ.ಎ.ಎಮ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.