ಮಂಗಳೂರು ಜುಲೈ 31 : ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಪೂಜಾರಿ ನಿಗೂಢ ಸಾವು ಪ್ರಕರಣದ ತನಿಖೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೈಗೆತ್ತಿಕೊಂಡಿದೆ. ಪೊಲೀಸ್ ಇಲಾಖೆ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದೆ. ಮಾಧ್ಯಮಗಳಲ್ಲಿ ಕಾವ್ಯ ನಿಗೂಢ ಸಾವಿನ ಕುರಿತು ಹಲವಾರು ಪ್ರಶ್ನೆಗಳನ್ನು ಮುಂದಿಟ್ಟು ಗಂಭೀರ ಚರ್ಚೆ ಆರಂಭಗೊಳ್ಳುತ್ತಿದ್ದಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಎ ಸಿ ಪಿ ರಾಜೇಂದ್ರ ಅವರ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಚುರುಕು ಗೊಳಿಸಿದೆ.

ಈ ನಡುವೆ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾವ್ಯ ಆತ್ಮಹತ್ಯೆ ಪ್ರಕರಣ ತನಿಖೆಯನ್ನು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಕೈಗೆತ್ತಿಕೊಂಡಿದೆ ಈ ಪ್ರಕರಣದ ತನಿಖೆಗೆ ಆಯೋಗ ಅದ್ಯಕ್ಷರಾದ ಡಾ.ಕೃಪಾ ಅಮರ್ ಆಳ್ವಾ ಸಮಿತಿಯೊಂದನ್ನು ರಚಿಸಿದ್ದಾರೆ. ಕಾವ್ಯ ನಿಗೂಢ ಸಾವಿನ ಪ್ರಕರಣ ಕುರಿತು ಮಾದ್ಯಮಗಳಲ್ಲಿ ಬಂದ ವರದಿ ಆಧರಿಸಿ ಆಯೋಗ ಸ್ವ ಪ್ರೇರಣೆಯಿಂದ ದೂರನ್ನು ದಾಖಲಿಸಿ ತನಿಖೆಗೆ ಸಮಿತಿ ರಚಿಸಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು ಕಾಯ್ದೆ 2005 ರ ಸೆಕ್ಷನ್ 14 (1)(ಇ) ರನ್ವಯ ಸಾಕ್ಷಗಳ ಮತ್ತು ದತ್ತಾವೇಜುಗಳ ವಿಚಾರಣೆಗಾಗಿ ಕಮಿಷನ್ ಗಳನ್ನು ನೇಮಿಸುವ ಅಧಿಕಾರವನ್ನು ಆಯೋಗ ಹೊಂದಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ 3 ಸದಸ್ಯರ ಸಮಿತಿಯನ್ನು ರಚಿಸಿದೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಆನಂದ .ಬಿ. ಲೋಬೋ, ಡಾ. ವನಿತಾ ಎನ್ ತೊರವಿ ಹಾಗು ಕೆ.ಬಿ.ರೂಪಾ ನಾಯ್ಕ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ಆಗಸ್ಟ್ 2 ರಂದು ಸಮಿತಿ ಮಂಗಳೂರಿಗೆ ಭೇಟಿ ನೀಡಲಿದೆ. ಸಮಿತಿಯ ಸದಸ್ಯರು ಆಳ್ವಾಸ್ ಶಿಕ್ಷಣ ಸಂಸ್ಥೆ , ಹಾಸ್ಟೆಲ್ ಸೇರಿದಂತೆ ಕಾವ್ಯ ಅವರ ಮನೆಗೆ ಭೇಟಿನೀಡಿ ಮಾಹಿತಿ ಕಲೆಹಾಕಿ 15 ದಿನಗಳ ಒಳಗೆ ಸಮಿತಿ ಆಯೋಗಕ್ಕೆ ವರದಿ ಸಲ್ಲಿಸಲಿದೆ.

Facebook Comments

comments