LATEST NEWS
ಮಣ್ಣಗುಡ್ಡದಲ್ಲಿ ಮಣ್ಣು ಹಿಡಿಯುತ್ತಿರುವ ಗುಜುರಿ ಕಾರುಗಳು -ಯಾವುದೇ ದೂರಿಗೂ ಜಗ್ಗದ ಗುಜುರಿ ಕಾರು ಮಾಲಕ
ಮಂಗಳೂರು ಡಿಸೆಂಬರ್ 17: ಸಾರ್ವಜನಿಕ ರಸ್ತೆಯಲ್ಲಿ ಗುಜುರಿ ಕಾರುಗಳನ್ನು ವರ್ಷಾನುಗಟ್ಟಲೆಯಿಂದ ನಿಲ್ಲಿಸಿರುವ ಬಗ್ಗೆ ಮಣ್ಣಗುಡ್ಡ ಬರ್ಕೇ ಲೇನ್ ನಿವಾಸಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹಲವಾರು ವರ್ಷಗಳಿಂದ ನಿಲ್ಲಿಸಿರುವ ಕಾರುಗಳಿಂದ ಬರ್ಕೇ ಲೇನ್ ರಸ್ತೆ ಹಾಳುಕೊಂಪೆಯಂತಾಗಿದೆ.
ಕಾರು ನಿಲ್ಲಿಸಿದ ಜಾಗದಲ್ಲಿ ನಾಯಿಗಳು ಹಾಗೂ ಹಾವುಗಳು ವಾಸ ಮಾಡಲು ಆರಂಭಿಸಿದ್ದು, ಈಗಾಗಲೇ ಇಲ್ಲಿನ ಜನ ನಾಯಿ ಕಡಿತಕ್ಕೂ ಒಳಗಾಗಿದ್ದಾರೆ. ಇನ್ನು ನಿಲ್ಲಿಸಿದ ಕಾರಿನ ಅಡಿ ಭಾಗದಲ್ಲಿ ಆಗೊಮ್ಮೆ ಈಗೊಮ್ಮೆ ಹಾವುಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿದೆ. ಹೀಗಾಗಿ ಈ ಗುಜುರಿ ಕಾರುಗಳನ್ನು ಇಲ್ಲಿಂದ ತೆರವು ಮಾಡಿ ಅಂತ ಹಲವು ಬಾರಿ ಸಾರ್ವಜನಿಕರು ಕಾರಿನ ಮಾಲೀಕರಲ್ಲಿ ಮನವಿ ಮಾಡಿದ್ದಾರೆ. ಈ ಮನವಿಗೆ ಬಗ್ಗದೇ ಇದ್ದಾಗ ಸ್ಥಳೀಯ ಕಾರ್ಪೊರೇಟರ್ ಬಳಿಯಲ್ಲೂ ದೂರಿ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕೇಳಿಕೊಂಡಿದ್ದಾರೆ. ಅದೂ ಕೈಗೂಡದೇ ಇದ್ದಾಗ ಪೊಲೀಸರಿಗೂ ದೂರು ನೀಡಲಾಗಿದೆ.
ಆದ್ರೆ ಇದ್ಯಾವುದಕ್ಕೂ ಕಾರಿನ ಮಾಲೀಕ ಜಗ್ಗದೆ ತನ್ನ ಪ್ರಭಾವ ಬಳಸಿ ಸ್ಥಳೀಯರನ್ನೇ ಗದರಿಸುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಈ ಗುಜುರಿ ಕಾರುಗಳು ನಿಂತಿರುವ ಜಾಗದಲ್ಲಿ ಜನರು ಕಸಗಳನ್ನು ಎಸೆಯಲು ಆರಂಭಿಸಿದ್ದು, ಇದರಿಂದ ಪರಿಸರದಲ್ಲಿ ದುರ್ನಾತ ಬೀರಲು ಆರಂಭವಾಗಿದೆ. ಹೀಗಾಗಿ ತಕ್ಷಣ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಕ್ಕಳು ವೃದ್ಧರು ಓಡಾಡುವ ಜಾಗದಲ್ಲಿ ನಾಯಿ ಹಾಗೂ ಹಾವಿನ ಉಪಟಳದಿಂದ ಅನಾಹುತ ಸಂಭವಿಸುವ ಮೊದಲು ಸೂಕ್ತ ಕ್ರಮ ಅಗತ್ಯ ಎಂಬುವುದು ಸ್ಥಳೀಯರ ಅಭಿಪ್ರಾಯ. ಆದ್ರೆ ಈಗಾಗಲೆ ಹಲವು ದೂರು ನೀಡಿದ್ರೂ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಕೂಡಾ ಇಲ್ಲಿನ ಜನರ ಪ್ರಶ್ನೆ.