LATEST NEWS
ಕೊರೊನಾ ನಂತರ ಮತ್ತೆ ಶಾಲೆ ಕಡೆ ಹೆಜ್ಜೆಹಾಕಿದ ಚಿಣ್ಣರು
ಮಂಗಳೂರು ಅಕ್ಟೋಬರ್ 25: ಕೊರೊನಾ ಎರಡನೇ ಅಲೆ ಬಳಿಕ ಸುಮಾರು ಒಂದೂವರೆ ವರ್ಷದ ನಂತರ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ 1ರಿಂದ 5ನೇ ತರಗತಿ ಮಕ್ಕಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ.
ಕೊರೋನಾ ಪಾಸಿಟಿವಿಟಿ ಕಡಿಮೆಯಾಗುತ್ತಿದ್ದಂತೆ ರಾಜ್ಯಾದ್ಯಂತ ಪ್ರಾಥಮಿಕ ಶಾಲೆ ಆರಂಭವಾಗಿದೆ. ಶಾಲಾ ವಠಾರದಲ್ಲಿ ಹುರುಪು ಲವಲವಿಕೆ ಕಂಡುಬರುತ್ತಿದೆ. ಶಿಕ್ಷಕರು ಬಹಳ ಜೋಶ್ ನಲ್ಲಿ ಪಾಠಗಳನ್ನು ಶುರುಮಾಡಿದ್ದಾರೆ. ಒಪ್ಪಿಗೆ ಪತ್ರ ಗಳ ಜೊತೆ ಪೋಷಕರು ಮಕ್ಕಳನ್ನು ಶಾಲೆಗೆ ತಂದು ಬಿಡುತ್ತಿದ್ದಾರೆ. ಈ ನಡುವೆ ಉಡುಪಿ ಡಿಡಿಪಿಐ ಸರ್ಕಾರಿ.. ಅನುದಾನಿತ ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಉಡುಪಿ ನಗರದ ವಳಕಾಡು ನಾರ್ಥ್ ಶಾಲೆಗೆ ಭೇಟಿ ಕೊಟ್ಟರು.
ಒಂದನೇ ತರಗತಿ ಭೇಟಿ ಕೊಟ್ಟ ಡಿಡಿಪಿಐ ಮಕ್ಕಳ ಜೊತೆ ಹಾಡಿ ಕುಣಿದರು. ಸ್ವತಃ ಡಿಡಿಪಿಐ ಎಚ್. ಎನ್. ನಾಗೂರ ಪಠ್ಯದಲ್ಲಿರುವ ಪದ್ಯವೊಂದನ್ನು ಮಕ್ಕಳಿಗೆ ಕಲಿಸಿದರು. ತರಗತಿಯ ಶಿಕ್ಷಕಿ ಪದ್ಯ ಕುಣಿತ ಕಲಿಸುವ ಸಂದರ್ಭ ಡಿಡಿಪಿಐ ತಾವೂ ಭಾಗಿಯಾದರು. ತರಗತಿಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.
ಕೊಠಡಿಗಳು ಸೇರಿದಂತೆ ಆವರಣವನ್ನು ಸ್ಯಾನಿಟೈಸ್ ಮಾಡಿ ಇಡಲಾಗಿತ್ತು. ಸೋಮವಾರ ಮುಂಜಾನೆ ಎಂದಿಗಿಂತ ಬೇಗ ಆಗಮಿಸಿದ ಶಿಕ್ಷಕರು ಶಾಲೆಯ ಪ್ರವೇಶ ದ್ವಾರ ಸೇರಿದಂತೆ ಕೊಠಡಿಗಳನ್ನು ಅಲಂಕರಿಸಿ, ಮಕ್ಕಳ ಸ್ವಾಗತಕ್ಕೆ ವ್ಯವಸ್ಥೆ ಮಾಡಿದರು. ಹಲವು ತಿಂಗಳ ಬಳಿಕ ಮಕ್ಕಳನ್ನು ನೇರವಾಗಿ ನೋಡುತ್ತಿರುವುದರಿಂದ ಶಿಕ್ಷಕರೂ ಉತ್ಸುಕರಾಗಿದ್ದುದು ಕಂಡು ಬಂತು. ಕೆಲವು ಶಾಲೆಗಳಲ್ಲಿ ಸಿಹಿತಿಂಡಿ, ಚಾಕ್ಲೆಟ್ ನೀಡಿ ಮಕ್ಕಳನ್ನು ಸ್ವಾಗತಿಸಿದರು. ಹೆತ್ತವರು ಮಕ್ಕಳನ್ನು ಶಾಲೆಗೆ ಬಿಟ್ಟು ತೆರಳಿದ್ದಾರೆ. ದಿನಬಿಟ್ಟು ದಿನ ವಾರದಲ್ಲಿ ಮೂರು ದಿನ ಮಧ್ಯಾಹ್ನದ ವರೆಗೆ ತರಗತಿಗಳು ನಡೆಯಲಿವೆ. ನವೆಂಬರ್ 2ರಿಂದ ಇಡೀ ದಿನ ತರಗತಿ ಇರಲಿದೆ.