Connect with us

    BANTWAL

    “SCDCC ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿರುವ ಕಾರಣಕ್ಕೆ ಶಾಖೆ ವಿಸ್ತರಿಸುತ್ತಿದೆ” ಡಾ.ಎಂ.ಎನ್. ರಾಜೇಂದ್ರ ಕುಮಾರ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ 113ನೇ ಶಾಖೆಯ ಉದ್ಘಾಟನಾ ಸಮಾರಂಭ ಮಂಗಳವಾರ  ಬಂಟ್ವಾಳ ಮಾಣಿಯ ಲಕ್ಷ್ಮಿನಾರಾಯಣ ಕಾಂಪ್ಲೆಕ್ಸ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


    ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತಾಡಿ, “ಮೊಳಹಳ್ಳಿ ಶಿವರಾಯರು ಪುತ್ತೂರಿನಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಹುಟ್ಟುಹಾಕಿದರು. ಮಾಣಿ ಪರಿಸರದ ಜನತೆ ಬ್ಯಾಂಕ್ ಸ್ಥಾಪನೆಗೆ ಅಭೂತಪೂರ್ವ ಸಹಕಾರ ನೀಡಿದ್ದಾರೆ. ಒಂದು ಬ್ಯಾಂಕ್ ಉದ್ಘಾಟನೆಗೆ ಇಷ್ಟು ಜನರು ಸೇರಿರುವುದು ಸಹಕಾರಿ ಕ್ಷೇತ್ರ ಇಂದು ಯಾವ ಮಟ್ಟಕ್ಕೆ ಬೆಳೆದಿದೆ ಅನ್ನೋದಕ್ಕೆ ಸಾಕ್ಷಿ. ನಮ್ಮಲ್ಲಿದ್ದ ಅನೇಕ ಬ್ಯಾಂಕ್ ಗಳು ವಿಲೀನಗೊಂಡು ಕಾಣೆಯಾಗಿವೆ. ಆದರೆ ಸಹಕಾರಿ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿರುವ ಕಾರಣಕ್ಕೆ ತನ್ನ ಶಾಖೆಯನ್ನು ವಿಸ್ತರಿಸುತ್ತಿದೆ. ವಾಣಿಜ್ಯ ಬ್ಯಾಂಕ್ ಗಳಲ್ಲಿ ಹೋದ್ರೆ “ಎಂದ ಎಪ್ಪಡಿ, ಕಿದರ್ ಸೆ ಆಯಾ” ಎನ್ನುತ್ತಾರೆ. ನಮ್ಮ ಹೆಣ್ಣುಮಕ್ಕಳಿಗೆ ಪಾಪ ಅವರ ಭಾಷೆ ಅರ್ಥವಾಗುವುದಿಲ್ಲ. ಆದರೆ ನಮ್ಮ ಸಹಕಾರಿ ಬ್ಯಾಂಕ್ ಗಳಲ್ಲಿ ಇಂತಹ ಪರಿಸ್ಥಿತಿಯಿಲ್ಲ ಹೀಗಾಗಿ ಗ್ರಾಹಕಸ್ನೇಹಿಯಾಗಿ ಬ್ಯಾಂಕ್ ಬೆಳೆದು ಬಂದಿದೆ. ಹೆಣ್ಣುಮಕ್ಕಳು ಉತ್ಸಾಹದಿಂದ ಬ್ಯಾಂಕ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದರು.
    ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, “ಸಹಕಾರಿ ಕ್ಷೇತ್ರದಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್ ಬಹಳ ದೊಡ್ಡ ಸಾಧನೆಯನ್ನು ಮಾಡಿದೆ. ದೇಶದ ಬೇರೆ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಮಾತ್ರ ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ನೆರವು ನೀಡುತ್ತಿದ್ದಾರೆ. ಎಸ್ ಸಿಡಿಸಿಸಿ ಬ್ಯಾಂಕ್ ಇಂದು ಜನರಿಂದ ಪ್ರಶಂಸೆಗೊಳಗಾಗಿದೆ. ಮಾಣಿ ಶಾಖೆಯ ಮೂಲಕ ಬ್ಯಾಂಕ್ ಇನ್ನಷ್ಟು ಎತ್ತರಕ್ಕೆ ಏರಲಿ” ಎಂದು ಶುಭ ಹಾರೈಸಿದರು.
    ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಮಾತಾಡುತ್ತಾ, “ಈ ಹಿಂದೆ ಇಡಿ ಅಧಿಕಾರಿಗಳು ಬ್ಯಾಂಕ್ ಗೆ ಭೇಟಿ ಕೊಟ್ಟಿದ್ದರು. ಅವರಲ್ಲೊಬ್ಬ ಅಧಿಕಾರಿ ನನ್ನ ಬಳಿ ಹೇಳಿದ್ದ. ನಾವು ದೇಶದ ಎಲ್ಲಾ ಬ್ಯಾಂಕ್ ಗಳಲ್ಲಿ ಪರಿಶೀಲನೆ ನಡೆಸಿದ್ದೇವೆ. ಆದರೆ ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಮಾತ್ರ ಯಾವುದೇ ರೀತಿಯ ಶಂಕಾಸ್ಪದ ಖಾತೆ ಸಿಕ್ಕಿಲ್ಲ. ಇದು ರಾಜೇಂದ್ರ ಕುಮಾರ್ ಅವರ ಹೆಗ್ಗಳಿಕೆ. ಕರಾವಳಿಯ ಕಂಬಳ, ಯಕ್ಷಗಾನ ಹೀಗೆ ಅನೇಕ ಕಲೆಗಳನ್ನು ಬೆಳೆಸಿ ಪ್ರೋತ್ಸಾಹಿಸುವ ಕೆಲಸವನ್ನು ರಾಜೇಂದ್ರ ಕುಮಾರ್ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳ ಕೈಯನ್ನು ಸ್ವಸಹಾಯ ಸಂಘಗಳ ಮೂಲಕ ಬಲಪಡಿಸುವ ಕೆಲಸವನ್ನು ನಾವೆಲ್ಲರೂ ಮುಕ್ತ ಮನಸಿನಿಂದ ಸ್ವಾಗತಿಸಬೇಕಿದೆ. ಪುರುಷರಿಗೆ ದುಡ್ಡು ಸಿಕ್ಕಿದರೆ ಅದು ಖರ್ಚು ಆಗುತ್ತದೆ, ಮಹಿಳೆಯರ ಕೈಗೆ ಸಿಕ್ಕಲ್ಲಿ ಕುಟುಂಬ ಶಕ್ತಿಯುತವಾಗುತ್ತದೆ. ಇಂತಹ ಕಾರ್ಯವನ್ನು ಬ್ಯಾಂಕ್ ಅಧ್ಯಕ್ಷರು ಇನ್ನಷ್ಟು ಮಾಡಲಿ” ಎಂದು ಶುಭ ಹಾರೈಸಿದರು.
    ವೇದಿಕೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ‘ಸಹಕಾರ ರತ್ನ’ ಡಾ| ಎಂ. ಎನ್. ರಾಜೇಂದ್ರ ಕುಮಾರ್, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ ಕೆ. ಮಾಣಿ, ಪುತ್ತೂರು ಶಾಸಕ ಅಶೋಕ್ ಕುಮಾರ್, ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪುಷ್ಟರಾಜ ಚೌಟ, ಶಾಖಾ ಕಟ್ಟಡದ ಮಾಲಕ ಎಂ. ನಾರಾಯಣ ಪೈ, ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರಾದ ಬಿ.ನಿರಂಜನ್, ಟಿ.ಜಿ.ರಾಜಾರಾಮ ಭಟ್, ಭಾಸ್ಕರ್‌ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಎಸ್. ರಾಜು ಪೂಜಾರಿ, ಶಶಿಕುಮಾರ್ ರೈ ಬಿ.,ಎಸ್. ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಹರಿಶ್ಚಂದ್ರ, ಎಂ. ಮಹೇಶ್ ಹೆಗ್ಡೆ, ಕೆ. ಜೈರಾಜ್ ಬಿ. ರೈ, ಬಿ. ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ರಮೇಶ್ ಹೆಚ್.ಎನ್. ಶ್ರೀಮತಿ ವತ್ಸಲ ಮತ್ತಿತರರು ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಬ್ಯಾಂಕ್ ನಿರ್ದೇಶಕರಾದ ಟಿ.ಜಿ. ರಾಜಾರಾಮ್ ಭಟ್ ಅತಿಥಿತಿಗಳನ್ನು ಸ್ವಾಗತಿಸಿದರು. ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ನೂತನ ಸ್ವಸಹಾಯ ಸಂಘಗಳ ಉದ್ಘಾಟನೆ, ಠೇವಣಿ ಪತ್ರ, ಸಾಲಪತ್ರ ವಿತರಣೆ ನಡೆಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *