LATEST NEWS
ಅಪ್ರಾಪ್ತೆಯ ಪ್ಯಾಂಟ್ ಜಿಪ್ ತೆರೆದರೆ ಲೈಂಗಿಕ ದೌರ್ಜನ್ಯ ಅಲ್ಲ ಎಂದಿದ್ದ ಮಹಿಳಾ ನ್ಯಾಯಮೂರ್ತಿಯ ಭಡ್ತಿಗೆ ತಡೆ
ಮುಂಬೈ : ಪೋಕ್ಸೋ ಕಾಯ್ದೆ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮೂರು ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈ ಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶೆ ನ್ಯಾ. ಪುಷ್ಪಾ ವಿರೇಂದ್ರ ಗನೇಡಿವಾಲ ಅವರನ್ನು ಖಾಯಂ ನ್ಯಾಯಮೂರ್ತಿಯನ್ನಾಗಿ ಮಾಡಬೇಕು ಎಂದು ಮಾಡಿದ್ದ ಶಿಫಾರಸ್ಸನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಹಿಂಪಡೆದಿದೆ.
ಜನವರಿ 19 ರಂದು ನೀಡಿ ತೀರ್ಪೊಂದರಲ್ಲಿ ನ್ಯಾ. ಪುಷ್ಪಾ ಅವರು, 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತ 39 ವರ್ಷದ ವ್ಯಕ್ತಿಯನ್ನು ಪೋಕ್ಸೋ ಕಾಯ್ದೆಯಡಿಯಲ್ಲಿನ ಆರೋಪಗಳಿಂದ ಖುಲಾಸೆಗೊಳಿಸಿದ್ದರು. ಬಟ್ಟೆ ಬಿಚ್ಚದೇ, ಚರ್ಚಕ್ಕೆ ಚರ್ಮ ತಾಗದೇ ಇದ್ದರೆ ಅದನ್ನು ಲೈಂಗಿಕ ಕಿರುಕುಳ ಎಂದು ವ್ಯಾಖ್ಯಾನಿಸಲಾಗದು ಎಂದು ತೀರ್ಪು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಪ್ರಾಪ್ತ ಬಾಲಕಿಯ ಕೈ ಹಿಡಿಯುವುದು, ಪ್ಯಾಂಟ್ ಜಿಪ್ ತೆರೆಯುವುದು ಇವೆಲ್ಲಾ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನದಡಿ ಬರುವುದಿಲ್ಲ ಎಂದು ತೀರ್ಪಿದ್ದರು. ಶುಕ್ರವಾರ ನೀಡಿದ ತೀರ್ಪೊಂದರಲ್ಲಿ, ಪ್ರತಿರೋಧ ಕಂಡು ಬರದೇ ಇದ್ದರೇ ಅದನ್ನು ಅತ್ಯಾಚಾರ ಎನ್ನಲಾಗದು ಎಂದು ನ್ಯಾಯ ನಿರ್ಣಯಿಸಿದ್ದರು.
ಪೋಕ್ಸೋ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾದ ತೀರ್ಪು ನೀಡಿದ ಬೆನ್ನಲ್ಲೇ, ಅವರ ಖಾಯಮಾತಿ ಶಿಫಾರಸ್ಸನ್ನು ಹಿಂಪಡೆಯಲಾಗಿದೆ. ಮೂಲಗಳಿಂದ ಮಾಹಿತಿ ಪ್ರಕಾರ ಅವರನ್ನು ಮತ್ತೆ ಜಿಲ್ಲಾ ನ್ಯಾಯಾಲಯಕ್ಕೆ ಹಿಂಬಡ್ತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 2019ರ ಫೆಬ್ರವರಿಯಲ್ಲಿ ಅವರು ಹೈ ಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.
ನ್ಯಾ. ಪುಷ್ಪಾ ಅವರ ಈ ತೀರ್ಪುಗಳು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ವಾದ ಪ್ರತಿವಾದಕ್ಕೆ ಕಾರಣವಾಗಿತ್ತು. ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಕೂಡ ಈ ತೀರ್ಪುಗಳ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದರು. ಇದರ ಬೆನ್ನಲ್ಲೇ ಅವರನ್ನುಖಾಯಮಾತಿ ಮಾಡುವ ಶಿಫಾರಸ್ಸನ್ನು ಹಿಂಪಡೆಯಲಾಗಿದೆ.