LATEST NEWS
ಮಕ್ಕಳೆದುರು ಅರೆಬೆತ್ತಲೆ ಅವಾಂತರ: ರೆಹನಾ ಫಾತಿಮಾಗೆ ಸುಪ್ರೀಂಕೋರ್ಟ್ ನಲ್ಲಿ ಮುಖಭಂಗ

ನವದೆಹಲಿ: ತನ್ನ ಬೆತ್ತಲೆ ದೇಹದ ಮೇಲೆ ಮಕ್ಕಳಿಂದ ಚಿತ್ರ ಬಿಡಿಸಿಕೊಂಡ ಕೇರಳದ ವಿವಾದಿತ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ಸುಪ್ರೀಂಕೋರ್ಟ್ ನಲ್ಲೂ ಮುಖಭಂಗವಾಗಿದ್ದು, ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತೀಮಾ ವಿರುದ್ಧ ಪೋಸ್ಕೋ ಹಾಗೂ ಐಟಿ ಕಾಯ್ದೆಯಡಿ ಜಾಮೀನು ರಹಿತ ಪ್ರಕರಣವನ್ನು ಕೇರಳ ಸರಕಾರ ದಾಖಲಿಸಲಾಗಿದೆ.
ಈ ಹಿನ್ನಲೆ ಈ ಹಿಂದೆ ಕೇರಳ ಹೈಕೋರ್ಟ್ ಕೂಡಾ ರೆಹಾನಾ ಫಾತೀಮಾ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿತ್ತು. ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಕಾರಣ, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ರೆಹಾನಾ ಫಾತಿಮಾ ಅವರು ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾ. ಅರುಣ್ ಮಿಶ್ರಾ ನೇತೃತ್ವದ ಪೀಠ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ನ್ಯಾಯಾಧೀಶರು ಅರ್ಜಿದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನೀವು ಸಾಮಾಜಿಕ ಕಾರ್ಯಕರ್ತರಾಗಿ ಯಾಕೆ ಹೀಗೆ ಮಾಡಿದೀರಿ? ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗವುದಿಲ್ಲವೇ ಎಂದು ಪ್ರಶ್ನೆ ಮಾಡಿದರು. ಈ ಪ್ರಕರಣದಲ್ಲಿ ನಮ್ಮ ಕಕ್ಷಿದಾರರ ಬಂಧನವಾದರೆ, ಜೀವನ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ನಮ್ಮ ಕಕ್ಷಿದಾರರು ವಿಚಾರಣೆಗೆ ಸರಿಯಾಗಿ ಹಾಜರಾಗಿದ್ದಾರೆ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು. ಜಾಮೀನು ಅರ್ಜಿಯ ವಿಚಾರಣೆ ಆಲಿಸಿದ ನ್ಯಾಯಪೀಠ ಜಾಮೀನು ನೀಡಲು ನಿರಾಕರಿಸಿತು.
ಅಪ್ರಾಪ್ತ ವಯಸ್ಸಿನ ತಮ್ಮ ಇಬ್ಬರು ಮಕ್ಕಳೆದುರು ಅರೆಬೆತ್ತಲೆಯಾಗಿ ಮಲಗಿ ತನ್ನ ದೇಹದ ಮೇಲೆ ಚಿತ್ರ ಬಿಡಿಸುವಂತೆ ರೆಹಾನಾ ಫಾತೀಮ ಮಕ್ಕಳಿಗೆ ಸೂಚಿಸಿದ್ದರು. ಅಷ್ಟೇ ಅಲ್ಲ, ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲೂ ಹರಿಬಿಟ್ಟಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಈ ದೃಶ್ಯಗಳಿಗೆ ಬಾಡಿ ಅಂಡ್ ಪಾಲಿಟಿಕ್ಸ್ ಎಂದು ಟೈಟಲ್ ನೀಡಿದ್ದರು. ರೆಹಾನಾ ಫಾತೀಮಾ ಅವರ ಅಪ್ತಾಪ್ತ ವಯಸ್ಸಿನ ಮಗ ಹಾಗೂ ಮಗಳು, ಹಾಸಿಗೆ ಮೇಲೆ ಮಲಗಿದ್ದ ತಾಯಿಯ ಅರೆಬೆತ್ತಲೆ ದೇಹದ ಮೇಲೆ ಕುಳಿತು ಚಿತ್ರ ಬಿಡಿಸುತ್ತಿದ್ದರು.