LATEST NEWS
ಶಬರಿಮಲೆ ತೀರ್ಪು ಶೀಘ್ರ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
ಶಬರಿಮಲೆ ತೀರ್ಪು ಶೀಘ್ರ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
ನವದೆಹಲಿ ಅಕ್ಟೋಬರ್ 9: ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಸಲ್ಲಿಸಿರುವ ಅರ್ಜಿಯ ಶೀಘ್ರ ವಿಚಾರಣೆಗೆ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಎಲ್ಲ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ ನೀಡುವ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನೀಡಿದ ತೀರ್ಪು ಅವೈಜ್ಞಾನಿಕ ಮತ್ತು ಆಧಾರರಹಿತ. ತೀರ್ಪಿನ ಮರುಪರಿಶೀಲನೆ ಮಾಡಬೇಕು’ ಎಂದು ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘದ (ನ್ಯಾಷನಲ್ ಅಯ್ಯಪ್ಪ ಡಿವೋಟಿಸ್ ಅಸೋಸಿಯೇಷನ್) ಅಧ್ಯಕ್ಷೆ ಶೈಲಜಾ ವಿಜಯನ್ ಅವರು ವಕೀಲ ಮ್ಯಾಥ್ಯೂ ಜೆ.ನೆಡುಂಪರಾ ಅವರ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರಿದ್ದ ನ್ಯಾಯಪೀಠವು ವಿಚಾರಣೆಗೆ ಅಂಗೀಕರಿಸಿತು.
‘ನಿಮ್ಮ ವಾದವನ್ನು ನಾವು ಆಲಿಸಿದ್ದೇವೆ. ನಿಮ್ಮ ಅರ್ಜಿಯು ಯಾದಿ ಪ್ರಕಾರ ವಿಚಾರಣೆಗೆ ಬರಲಿದೆ’ ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದರು.
ಈಗಾಗಲೇ ಅಯ್ಯಪ್ಪ ಭಕ್ತರು ಕೇರಳಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಕೇರಳ ಸರಕಾರ ಸುಪ್ರೀಂಕೋರ್ಟ್ ಆದೇಶವನ್ನು ಅನುಷ್ಠಾನ ಮಾಡುವ ಮೊದಲು ಸಂಬಂಧಿಸಿದವರೊಡನೆ ಮಾತುಕತೆ ನಡೆಸಬೇಕು ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.