LATEST NEWS
ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನ: ಯೆಡಾಡಿ-ಮತ್ಯಾಡಿ ಶಾಲೆಯಲ್ಲಿ ಶೆಫಿನ್ಸ್ ನ ಸ್ಪೋಕನ್ ಇಂಗ್ಲಿಷ್ ತರಬೇತಿ ಉದ್ಘಾಟನೆ
ಉಡುಪಿ, ಸೆಪ್ಟಂಬರ್ 26: ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿ ಕ್ಲಸ್ಟರ್ನ ಯೆಡಾಡಿ-ಮತ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶೆಫಿನ್ಸ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಇವರು ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದಡಿಯಲ್ಲಿ ನಡೆಸುತ್ತಿರುವ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಶಾಲಾಭಿವೃದ್ಧಿ ಮಂಡಳಿಯವರ ವಿಶೇಷ ಕಾಳಜಿಯೊಂದಿಗೆ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲಯನ್ ಅರುಣ್ ಕುಮಾರ್ ಹೆಗ್ಡೆಯವರು ತಮ್ಮ ಉದ್ಘಾಟನಾ ಬಾಷಣದಲ್ಲಿ, ಸದ್ರಿ ಶಾಲೆಯಲ್ಲಿನ ಮುಖ್ಯೋಪಾಧ್ಯಾಯರು ಸಹ ಶೆಫಿನ್ಸ್ ಸಂಸ್ಥೆಯ ಪ್ರಭಾವದಿಂದ ಇಂಗ್ಲೀಷ್ ನಲ್ಲಿ ತಮ್ಮ ಸ್ವಾಗತ ಭಾಷಣ ಮಾಡಿರುವುದನ್ನು ಕಂಡು ಸಂತಸವಾಗುತ್ತದೆ ಎಂದರು. ಶೆಫಿನ್ಸ್ ಸಂಸ್ಥೆಯ 04 ದಿನದ ತರಬೇತಿ ಎಷ್ಟೊಂದು ಪರಿಣಾಮಕಾರಿಯಾಗಿತ್ತು ಎನ್ನುವುದನ್ನು ಇದು ಬಿಂಬಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಶೆಫಿನ್ಸ್ ನಿರ್ದೇಶಕ ಶ್ರೀ ಮನೋಜ್ ಕಡಬ ಮಾತನಾಡಿ, ಇತ್ತೀಚಿನ ಪತ್ರಿಕಾ ವರದಿಗಳ ಪ್ರಕಾರ ಉಡುಪಿ ಮತ್ತು ದಕ ಜಿಲ್ಲೆಗಳಲ್ಲಿ 55 ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿರುತ್ತದೆ. ಹಾಗೆಯೇ ಕರ್ನಾಟಕ ಸರಕಾರದ ಮಾಜಿ ಸಚಿವರೋರ್ವರು ಸುಳ್ಯದಲ್ಲಿ ನಡೆದ ಸಮಾರಂಭವೊಂದರಲ್ಲಿ ಮುಂದಿನ 5 ವರ್ಷಗಳಲ್ಲಿ 10,000ಕ್ಕಿಂತ ಹೆಚ್ಚು ಶಾಲೆಗಳು ಮುಚ್ಚುವ ಭೀತಿಯನ್ನು ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿ, ತಾವು ಮಾಡುತ್ತಿರುವ ಆಂದೋಲನದಿಂದಾಗಿ ಸಾಲ ಮಾಡಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರು ಮುಂದಿನ ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಾಗಿ, ಆ ಮೂಲಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿ, ಕನ್ನಡ ಮಾಧ್ಯಮ ಶಾಲೆಗಳು ಉಳಿಯುವಂತಾಗಲೆಂದು ಆಶಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀ ಮಂಜುನಾಥ ಮೊಗವೀರ ವಹಿಸಿದ್ದು, ಅತಿಥಿಗಳಾಗಿ ಪಂಚಾಯತ್ ಸದಸ್ಯ ಶ್ರೀ ದಿನೇಶ್ ಮೊಗವೀರ, ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಮಣಿ, ಹಾಗೂ ಸಿದ್ದಾಪುರ ಸರಸ್ವತಿ ವಿದ್ಯಾಲಯದ ಸಹ-ಅಧ್ಯಾಪಿಕೆ ಶ್ರೀಮತಿ ಸ್ಮಿತಾ ಕೆ.ಸಿ, ಶೆಫಿನ್ಸ್ ಸಂಯೋಜಕಿ ಶ್ರೀಮತಿ ಅರ್ಪಿತಾ ಬ್ರಹ್ಮಾವರ, ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅತಿಥಿ ಶಿಕ್ಷಕಿ ಶ್ರೀಮತಿ ಮಂಜುಳ ವಿದ್ಯಾರ್ಥಿಗಳ ವಿವಿಧ ಚಟುವಟಿಕೆಗಳ ನೇತೃತ್ವ ವಹಿಸಿದ್ದರು.
ಸಮಾರಂಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ನ ಚಟುವಟಿಕಾ ಪುಸ್ತಕಗಳನ್ನು ವಿತರಿಸಲಾಯಿತು. ಮಕ್ಕಳು ಆಂಗ್ಲ ಭಾಷೆಯಲ್ಲಿ ತಾವು ಕಲಿತ ಟಂಗ್ ಟ್ವಿಸ್ಟರ್, ಪದ್ಯ ಹಾಗೂ ಸಂಭಾಷಣೆಯನ್ನು ಪ್ರದರ್ಶಿಸಿದರು. ಶೆಫಿನ್ಸ್ ನಿಂದ ತರಬೇತಿ ಪಡೆದ ಶಿಕ್ಷಕಿ ಕುಮಾರಿ ಪೂರ್ಣಿಮ ಕಾರ್ಯಕ್ರಮ ನಿರೂಪಿಸಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಮಣಿ ಸ್ವಾಗತಿಸಿ, ಅತಿಥಿ ಶಿಕ್ಷಕಿ ಶ್ರೀಮತಿ ಶಾಂತಾ ವಂದಿಸಿದರು.