KARNATAKA
ಗ್ರಾಮಸ್ಥರ ಪ್ರತಿಭಟನೆ ಮಧ್ಯೆ ಭಟ್ಕಳದಲ್ಲಿ ಸಾವರ್ಕರ್ ವೃತ್ತ, ಭಗವಾಧ್ವಜ ತೆರವು..!
ಭಟ್ಕಳ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜ ತೆರವುಗೊಳಿಸಿರುವ ಪ್ರಕರಣ ಮಾಸುವ ಮುನ್ನ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ತರಹದ ಮತ್ತೊಂದು ಘಟನೆ ನಡೆದಿದೆ.
ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದಲ್ಲಿನ ಸಮುದ್ರ ದಡದಲ್ಲಿದ್ದ ಸಾವರ್ಕರ್ ವೃತ್ತ ಮತ್ತು ಭಗವಾಧ್ವಜವನ್ನು ತೆರವುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತೆಂಗಿನಗುಂಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಿಜೆಪಿ ಮುಖಂಡರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಗೋವಿಂದ್ ನಾಯ್ಕ್, ಸುಬ್ರಾಯ ದೇವಾಡಿಗ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸಾವರ್ಕರ್ ನಾಮಫಲಕ ಅಳವಡಿಕೆಗೆ ಒಪ್ಪಿಗೆ ನೀಡಲಾಗಿತ್ತು. ಈಗ ಗ್ರಾಮ ಪಂಚಾಯಿತಿ ಪಿಡಿಒ ಏಕಾಏಕಿ ಜೆಸಿಬಿ ಮೂಲಕ ನಾಮಫಲಕ ತೆರವುಗೊಳಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಯಾವ ಅಪ್ಪನ ಮನೆ ಆಸ್ತಿ ಅಂತಾ ಧ್ವಜಸ್ತಂಭ ತೆಗೆದಿದ್ದೀರಿ? ಇದೇನು ಪಾಕಿಸ್ತಾನ ಅಂತಾ ತೆಗೆದ್ರಾ? ಹಿಂದೂಗಳು ಬೇವರ್ಸಿಗಳು ಅಂತ ಅಂದುಕೊಂಡು ತೆಗೆದ್ರಾ? ಹಿಂದೂಗಳು ಸುಮ್ಮನೆ ಕುಳಿತಿಲ್ಲ, ನಿಮಗೆ ಯಾರ ಒತ್ತಡವಿದೆ ಹೇಳಿ. ಇದು ಭಟ್ಕಳ, ಯಾರದ್ದೋ ಕೈಗೊಂಬೆಯಾಗಿ ಆಟವಾಡಬೇಡಿ ಎಂದು ಬಿಜೆಪಿ ಮುಖಂಡ ಗೋವಿಂದ ನಾಯ್ಕ್ ಪಿಡಿಒಗೆ ತರಾಟೆಗೆ ತೆಗೆದುಕೊಂಡರು.
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜ ತೆರವುಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾನೂನು ಬದ್ಧವಾಗಿ ಡಿಸಿಯಿಂದ ಅನುಮತಿ ಪಡೆದು ಧ್ವಜ ಹಾಕಿದ್ದರು. ಗ್ರಾಮ ಪಂಚಾಯಿಂದ ಠರಾವು ಆಗಿ ಕಾನೂನಾತ್ಮಕವಾಗಿಯೇ ಧ್ವಜ ಹಾರಿಸಿದ್ದಾರೆ. ರಾಜಕಾರಣಕ್ಕಾಗಿ ಈ ರೀತಿ ವಿರೋಧ ಮಾಡುವುದು ಒಳ್ಳೆಯ ಲಕ್ಷಣ ಅಲ್ಲ. ಇದೆಲ್ಲವನ್ನೂ ರಾಜ್ಯದ ಪ್ರಜ್ಞಾವಂತ ಜನ ಚರ್ಚೆ ಮಾಡುತ್ತಿದ್ದಾರೆ. ರಾಜ್ಯದ ಜನ ಕಾಂಗ್ರೆಸ್ಗೆ ದೊಡ್ಡ ಪಾಠ ಕಲಿಸಲಿದ್ದಾರೆ ಎಂದು ಕುಮಟಾದಲ್ಲಿ ಸಂಸದ ಅನಂತಕುಮಾರ್ ಹೆಗಡೆ ಗುಡುಗಿದ್ದಾರೆ.